Friday, September 26, 2008

ಕೇಳೇ ಗೆಳತಿ


ಹೇಗಿದ್ದೀಯಾ ಗೆಳತಿ ? ಎಷ್ಟೊಂದು ದಿನಗಳಾದವಲ್ಲ ನಾನೂ ನೀನೂ ಮಾತಾಡಿ ; ಮದುವೆಯಾದ ಹೊಸತು, ಗಂಡನ ಸಾಂಗತ್ಯ ಸುಖದಲ್ಲಿ ಮೈಮರೆತು ಪ್ರಪಂಚವನ್ನೇ ಮರೆತುಬಿಟ್ಟಿದ್ದಾಳೆ ಎಂದು ಬೈದುಕೊಂಡು, ಜೊತೆಗೇ ನಸುನಕ್ಕು ನೀನೂ ಸುಮ್ಮನಿರಬಹುದು ; ನೀನೊಬ್ಬಳೇ ಅಲ್ಲ, ಎಲ್ಲರೂ ಹಾಗೇ ತಿಳಿದುಕೊಂಡಿದ್ದಾರೆ, ಅದಕ್ಕೆ ಯಾರದೂ ಸುದ್ದಿಯೇ ಇಲ್ಲ. ಮಾತನಾಡಲು ಮನಸ್ಸಿಲ್ಲದೆ ನಾನೂ ಸುಮ್ಮನಿದ್ದೇನೆ. ನಿನಗೆ ಫೋನಾಯಿಸಿದರೆ ಕೀಟಲೆಯ ಮಾತುಗಳನ್ನಾಡಿ ತಮಾಷೆ ಮಾಡುತ್ತೀಯ; ಆಗ ನಾನು ಬಲವಂತವಾಗಿ ನಗಬೇಕಾಗುತ್ತದೆ, ಅಪ್ರಾಮಾಣಿಕತೆಯ ಭಾವ; ಪ್ರತಿಕ್ರಿಯಿಸಬೇಕಾಗುತ್ತದೆ, ಸುಳ್ಳಿನ ಮೊರೆ; ಈ ಗೊಡವೆ ಎಲ್ಲ ಯಾಕೆ ಹೇಳು ? ಅದಕ್ಕೇ ನನ್ನ ಪಾಡಿಗೆ ನಾನಿದ್ದೇನೆ. ಯಾಕೋ ಇತ್ತೀಚಿನ ದಿನಗಳಲ್ಲಿ ಮೌನವೇ ಹೆಚ್ಚು ಆಪ್ತವೆನಿಸುತ್ತಿದೆ.


ನಿನಗೆ ಗೊತ್ತು, ಮದುವೆಯ ಬಗ್ಗೆ ನನಗೆ ಅಂಥ ಒಳ್ಳೆಯ ಭಾವನೆಗಳೇನೂ ಇರಲಿಲ್ಲ. ಇದಕ್ಕೆ ಕಾರಣ, ಕಾಲೇಜು ದಿನಗಳಲ್ಲಿ ತುಂಬಾ ಕನಸುಗಳನ್ನು ಕಟ್ಟಿಕೊಂಡು, ಮದುವೆಯ ನಂತರ ಗಂಡ-ಮನೆ-ಮಕ್ಕಳ ಜವಾಬ್ದಾರಿ, ನಿರೀಕ್ಷೆಗಳ ಭಾರದಲ್ಲಿ ಕುಗ್ಗಿಹೋದ ಕಳೆದುಹೋದ ಕೆಲವು ಗೆಳತಿಯರ ಬದುಕು. ಅದಕ್ಕಿಂತ ಹೆಚ್ಚಾಗಿ ಅಮ್ಮನ ಬದುಕನ್ನು ತುಂಬ ಹತ್ತಿರದಿಂದ ನೋಡಿದ್ದು ; ಅಪ್ಪ ಕುಡುಕನಲ್ಲ, ಕೆಟ್ಟವನಲ್ಲ, ಸಿಗರೇಟು-ಬೀಡಿ ಸೇದುವುದಿಲ್ಲ, ಕವಳ ಹಾಕುವುದಿಲ್ಲ, ತೀರಾ ಬೇಜವಾಬ್ದಾರಿಯೂ ಅಲ್ಲ, ಆಗಾಗ ಇಸ್ಪೀಟು ಆಡಿ ದುಡ್ಡು ಕಳೆಯುವುದನ್ನು ಬಿಟ್ಟರೆ ಬೇರೆ ಯಾವ ಕೆಟ್ಟ ಚಟಗಳೂ ಇಲ್ಲ. ಮತ್ತೇನು ತೊಂದರೆ ಕೇಳುತ್ತೀಯ? . . .ಇವುಗಳಿಗೆ ಹೊರತಾಗಿ ನನ್ನನ್ನ ಕಾಡಿದ್ದು ಸೂಕ್ಷ್ಮಸಂವೇದನೆಗಳಿಲ್ಲದ ಅವನ ವ್ಯಕ್ತಿತ್ವ ; ಭಾವನೆಗಳ ಸೂಕ್ಷ್ಮತೆಗಳು ಅವನಿಗರ್ಥವಾಗುವುದಿಲ್ಲ, ಸ್ಪಂದಿಸುವುದೂ ಗೊತ್ತಿಲ್ಲ. ಇದೇನು ದೊಡ್ಡ ಸಮಸ್ಯೆಯಲ್ಲ, ಆದರೆ ಗೆಳತಿ, ಇಂಥವರನ್ನು ಕಟ್ಟಿಕೊಂಡವರು ಬದುಕಿನ ಸಣ್ಣಪುಟ್ಟ ಸಂಭ್ರಮಗಳಿಂದ, ಸುಖದ ಭಾವಗಳಿಂದ ವಂಚಿತರಾಗಬೇಕಾಗುತ್ತದೆ. ದಿನ ಬೆಳಗಾದರೆ ಜಗಳ, ಸ್ವತಃ ಬುದ್ಧಿ ಇಲ್ಲ, ಹೇಳಿದರೂ ಕೇಳುವುದಿಲ್ಲ, ಸಣ್ಣಪುಟ್ಟ ಸುಳ್ಳು-ಮೋಸ, ಸೋಮಾರಿತನ, ಇನ್ನೊಬ್ಬರಿಗೆ ನೋವಾಗುತ್ತದೆ ಎನ್ನುವ ಪ್ರಜ್ಙೆಯಿಲ್ಲದ ಉಡಾಫೆ ಈ ತರದ್ದನ್ನೆಲ್ಲ ನೋಡುತ್ತಾ ಬೆಳೆದ ನನಗೆ ನನ್ನ ಬದುಕಿನಲ್ಲಿ ಬರುವ ಹುಡುಗನ ಬಗ್ಗೆ ಆತಂಕವಿತ್ತು. ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ, ನಾನು ಖಿನ್ನಳಾದಾಗ, ಬೇಸರ ಕಾಡಿದಾಗ ನನ್ನ ಕೈ ಹಿಡಿದು ಮೇಲೆತ್ತಿ ಜೊತೆಗೆ ಕರೆದುಕೊಂಡು ಹೋಗುವ ಜೊತೆಗಾರನಿಗಾಗಿ, ಮನಸ್ಸನ್ನು ಮುಟ್ಟುವ, ತಟ್ಟುವ, ಕಾಡುವ ಹುಡುಗನಿಗಾಗಿ ಹಂಬಲಿಸಿದ್ದೆ ನಾನು; ನನ್ನ ಬದುಕಿನ ಕಲ್ಪನೆಯೇ ಬೇರೆಯಿತ್ತು . . . . .


ನನಗೆ ತುಂಬ ಸಾಮಾನ್ಯವಾದ ಗಂಡ-ಹೆಂಡತಿಯ ಸಂಬಂಧ ಬೇಕಿಲ್ಲ ; ಐ ವಿಲ್ ಬಿ ಎಕ್ಸ್ಪೆಕ್ಟಿಂಗ್ ಸಂಥಿಂಗ್ ಸ್ಪೆಷಲ್ ಎಂಡ್ ಎಕ್ಸೈಟಿಂಗ್ ಎಕ್ಸ್ಪೀರಿಯನ್ಸಸ್. ಇಲ್ಲದಿದ್ದರೆ ಬದುಕು ಬೋರಾಗುತ್ತದೆ, ಏಕತಾನತೆಯಿಂದ ನರಳುತ್ತದೆ ; ಆಕರ್ಷಣೆಯೇ ಇಲ್ಲದ ಬದುಕು ಯಾರಿಗೆ ಹಿತವಾಗುತ್ತದೆ ಹೇಳು ?. ನನ್ನ ಪ್ರಕಾರ ಜೀವನ ಪ್ರೀತಿಸಿ ಅನುಭವಿಸುವಂತಿರಬೇಕು, ಅದಕ್ಕೆ ಜೀವನಪೂರ್ತಿ ಜೊತೆಯಿರಬೇಕಾದ ವ್ಯಕ್ತಿಯಿಂದ ಒಂದು ರೀತಿಯ ಭಾವನಾತ್ಮಕ ಕಂಫರ್ಟ್ ನೆಸ್ ಸಿಗಬೇಕು. ಇದನ್ನೆಲ್ಲ ನನ್ನ ಹುಡುಗನಿಗೆ ಎಷ್ಟೋ ಸಲ ಹೇಳಿದ್ದೇನೆ. ಆದರೂ ಕೆಲವೊಂದು ಮಾತು-ವರ್ತನೆಗಳಲ್ಲಿ ಅಪ್ಪನ ನೆರಳು, ಆಗೊಮ್ಮೆ ಈಗೊಮ್ಮೆ ಭರಿಸಲಾಗದ ವ್ಯಂಗ್ಯ-ಚುಚ್ಚುಮಾತುಗಳು. ಈ ಗಂಡಸರೇಕೆ ಹೀಗೆ? ಹೆಂಗಸರ ನವಿರು ಭಾವನೆಗಳ ಪ್ರಪಂಚ ಅವರಿಗೇಕೆ ಅರ್ಥವಾಗುವುದಿಲ್ಲ? ಮತ್ತೆ ಮತ್ತೆ ನೋಯಿಸುತ್ತಾರೆ, ಮತ್ತೆ ಮತ್ತೆ ನರಳಿಸುತ್ತಾರೆ. ಮದುವೆಗೆ ಮೊದಲಿನ ಬಣ್ಣದ ಕನಸುಗಳ ಜಾಗದಲ್ಲೀಗ ತೀವ್ರ ನಿರಾಸೆ, ಭ್ರಮನಿರಸನ. . . . .ಕತ್ತಲ ರಾತ್ರಿಯಲ್ಲಿ ಹೆಂಡತಿ ಅಳುತ್ತಿದ್ದಾಳೆ ಎಂದು ಗೊತ್ತಾಗಿಯೂ, ಸಮಾಧಾನ ಮಾಡದೆ, ಸಂತೈಸದೆ ಸುಮ್ಮನೆ ಮಲಗಿದ್ದ ವ್ಯಕ್ತಿ ಮನಸ್ಸಿಗೆ ಹೇಗೆ ಹತ್ತಿರವಾದಾನು? ನೀನೆ ಹೇಳು. ರಾತ್ರಿ ಕಳೆಯುತ್ತದೆ, ಬೆಳಗಾಗುತ್ತದೆ, ಮತ್ತೆ ರಾತ್ರಿ . . . ಕ್ಷಣಗಳು ದಿನಗಳು ಗಾಢ ವಿಷಾದದಲ್ಲಿ ಉರುಳಿಹೋಗುತ್ತಿವೆ . . .ವಾರಕ್ಕೊಮ್ಮೆ ಅಮ್ಮ ಪೋನ್ ಮಾಡುತ್ತಾಳೆ ; ಎಲ್ಲವನ್ನೂ ಹೇಳಿಕೊಂಡು ಅಳಬೇಕೆಂದು ಮನಸ್ಸು ಹಾತೊರೆಯುತ್ತದೆ, ಆದರೆ ಆಗುವುದಿಲ್ಲ; ನನ್ನ ನಿರೀಕ್ಷೆಗಳಿಗೆ ಮಾತಿನ ರೂಪ ಕೊಡಲಾಗದೆ ಸೋಲುತ್ತೇನೆ, ಸುಮ್ಮನಾಗುತ್ತೇನೆ.


ಇನ್ನೆಷ್ಟು ದಿನ ಹೀಗೆ? ಗೊತ್ತಿಲ್ಲ ; ಮಾತನ್ನೇ ಅರ್ಥಮಾಡಿಕೊಳ್ಳದವನು ಮೌನಕ್ಕೆ ಸ್ಪಂದಿಸುತ್ತಾನೆಯೇ?!!!. ಆದಷ್ಟು ಬೇಗ ಮೌನದ ಕಟ್ಟೆಯೊಡೆದು ಹೊರಗೆ ಬರಬೇಕು ; ಬೆಳಗಿನ ಎಳೆಬಿಸಿಲಲ್ಲಿ ಹೊಳೆಯುವ ಎಲೆಗಳಿಂದ, ನಗುವ ಹೂಗಳಿಂದ ಸ್ಫೂರ್ತಿ ಪಡೆಯಲೆತ್ನಿಸಬೇಕು; ಗೆಳೆಯರೊಡನೆ ಹರಟಬೇಕು.

Wednesday, September 10, 2008

ಆ ದಿನಗಳು . . . .

ಕೆಲವು ನೆನಪುಗಳು ಸದಾ ಹಸಿರು ; ನೆನಪಾದಾಗ ಮನಸ್ಸಿನಲ್ಲಿ ಸಂತೋಷದ ಬುಗ್ಗೆ, ಏನೋ ಉಲ್ಲಾಸ ; ಅಂಥವುಗಳಲ್ಲಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕೆಲಸ ಮಾಡ್ತ ಹೈದರಾಬಾದಿನಲ್ಲಿ ಕಳೆದ ದಿನಗಳದೂ ಒಂದು. ಈಗಷ್ಟೇ, ಅಲ್ಲೇ ಕೆಲಸ ಮಾಡುತ್ತಿರುವ ನನ್ನ ಸ್ನೇಹಿತನೊಬ್ಬನಿಗೆ ಫೋನಾಯಿಸಿದ್ದೆ, ಅವನ ಜೊತೆ ಮಾತಾಡುತ್ತಿರುವಾಗ ಅಲ್ಲಿಯ ಚಿತ್ರಗಳೆಲ್ಲ ಕಣ್ನ ಮುಂದೆ - ಹೈದರಾಬಾದಿನ ಬಸ್ ಸ್ಟ್ಯಾಂಡ್, ಕೋಟಿ, ಫಿಲ್ಮ್ ಸಿಟಿ, ಆಫೀಸ್, ಕ್ಯಾಂಟೀನ್, ನಾನು ಮನೆ ಮಾಡಿಕೊಂಡಿದ್ದ ಸ್ಥಳವಾದ ಭಾಗ್ಯಲತಾ, ಸುಲ್ತಾನ್ ಬಜಾರ್ . . . . ಹೀಗೆ ಪ್ರತಿಯೊಂದೂ. ಫೋನ್ ಇಟ್ಟ ಎಷ್ಟೋ ಹೊತ್ತಿನ ನಂತರವೂ ಅದೇ ಗುಂಗು. ಯಾವಾಗಲೂ ಮನುಷ್ಯನಿಗೆ ಬಿಟ್ಟುಬಂದಿದ್ದರ ಬಗ್ಗೆ ವ್ಯಾಮೋಹ ಜಾಸ್ತಿ ಅಂತೆ; ಹ್ಯದರಾಬಾದಿನ ವಿಷಯದಲ್ಲಿ ನಾನೂ ಈ ಭಾವವನ್ನು ಅನುಭವಿಸಿದ್ದೇನೆ, ಅನುಭವಿಸುತ್ತಿರುತ್ತೇನೆ.


ಎಂ.ಎ. ಮುಗಿಸಿ ಕೆಲಸಕ್ಕಾಗಿ ಅಲೆಯುತ್ತಿದ್ದ ದಿನಗಳವು ; ವರ್ಷದ ಮೇಲಾದರೂ ಕೆಲಸ ಸಿಗದಿದ್ದಾಗ ಪಿ.ಯೂ.ಸಿ.ಯಲ್ಲಿ ಮೊದಲು ಸ್ಯನ್ಸ್ ತೆಗೆದುಕೊಂಡು , ನಂತರ ಆರ್ಟ್ಸ್ ಗೆ ಬದಲಾಯಿಸಿಕೊಂಡು, ಅದರಲ್ಲೂ ಕನ್ನಡ ಆಪ್ಶನಲ್ ತೆಗೆದುಕೊಂಡು ನಂತರ ಅದರಲ್ಲೇ ಎಂ.ಎ. ಮಾಡಿದ್ದಕ್ಕೇ ಹೀಗೆ ಎಂದು ಖಿನ್ನತೆಗೆ ಜಾರಿದ್ದುಂಟು. ಯಾರಿಗಿರುವುದಿಲ್ಲ ಹೇಳಿ, ದುಡಿಯುವ ಆಸೆ ; ಅದರಲ್ಲೂ ನನಗಂತೂ ನನ್ನ ಕಾಲ ಮೇಲೆ ನಿಂತುಕೊಂಡು ನನ್ನ ಅನ್ನ ನಾನೇ ಸಂಪಾದಿಸಿಕೊಳ್ಳಬೇಕೆಂಬ ಅದಮ್ಯ ಆಸೆಯಿತ್ತು ; ಹಾಸ್ಟೆಲ್ಲಿನಲ್ಲಿರುವಾಗ ಗೆಳತಿಯರೆಲ್ಲ ಸೇರಿ ಆ ದಿನಗಳ ಬಗ್ಗೆ ಕನಸು ಕಟ್ಟಿಕೊಂಡು ಖುಷಿಪಡುತ್ತಿದ್ದೆವು.ಮುಂದೆ ಈಟಿವಿ ಯಲ್ಲಿ ಕೆಲಸ ಸಿಕ್ಕು ಹೊರಟು ನಿಂತಾಗ ಬಂದ ಪ್ರತಿಕ್ರಿಯೆಗಳು ಅಷ್ಟೇನೂ ಆಶಾದಾಯಾಕವಾಗಿರಲಿಲ್ಲ ; ಕೆಲಸಕ್ಕೋಸ್ಕರ ಅಷ್ಟು ದೂರ . . . ? ಬೇರೆ ರಾಜ್ಯಕ್ಕೆ ಹೋಗಬೇಕಾ ? ಅದರಲ್ಲೂ ಹೆಣ್ಣುಮಗಳು !!! ಅಲ್ಲಿ ಒಬ್ಬಳೇ ಹೇಗಿರ್ತೀಯಾ ?- ಎನ್ನುವಂತಹ ನಿರುತ್ತೇಜಕ ಮಾತುಗಳು ; ನನ್ನ ಮನೆಯಲ್ಲಿ ಹೋಗುವುದು ಬೇಡ ಎಂದು ಹೇಳದಿದ್ದರೂ ಕಳಿಸುವುದಕ್ಕೆ ಅಷ್ಟೇನೂ ಮನಸ್ಸಿರಲಿಲ್ಲ, ಅಲ್ಲಿಗೆ ಹೋದರೆ ಮದುವೆ ಮಾಡುವುದಕ್ಕೆ ತೊಂದರೆಯಾಗುತ್ತದೆ ಎನ್ನುವ ಆತಂಕ. .

ಈ ಜನ ಯಾಕೆ ತಮ್ಮ ಜೀವನವನ್ನು ಸೀಮಿತಗೊಳಿಸಿಕೊಂಡು ಆಲೋಚಿಸುತ್ತಾರೆ, ಹಾಗೆಯೇ ಬದುಕುತ್ತಾರೆ ? ಮದುವೆ-ಗಂಡ-ಮನೆ-ಮಕ್ಕಳು ಈ ಚೌಕಟ್ಟಿನಿಂದ ಹೊರಗೆ ಬಂದು ಹೊಸ ಹೊಸ ಅನುಭವಗಳನ್ನ ಯಾಕೆ ಪಡೆಯಲಿಚ್ಛಿಸುವುದಿಲ್ಲ ? ಎದ್ದಿದ್ದವು ಪ್ರಶ್ನೆಗಳು ; ಆದರೆ ಕೇಳುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ ಎಂದೆನಿಸಿ ಹೈದರಾಬಾದಿಗೆ ಹೊರಟುಬಂದಿದ್ದೆ. ರಾಮೋಜಿ ಫಿಲ್ಮ ಸಿಟಿ, ಈಟೀವಿ ಇವುಗಳ ಬಗ್ಗೆ ಹೊರಗಿನವರಿಗೆ ಸಹಜವಾಗಿ ಒಂದು ರೀತಿಯ ಆಕರ್ಷಣೆ ಇರುವಂತೆ ನಾನೂ ಸಂಭ್ರಮ, ಕುತೂಹಲ, ಆತಂಕ ಇನ್ನೂ ಹೇಳಲಾಗದ ಭಾವಗಳೊಂದಿಗೆ ಹೊಸಾ ಪ್ರಪಂಚದಲ್ಲಿ ಕಾಲಿಟ್ಟಿದ್ದೆ. ಅಲ್ಲಿಂದ ಶುರುವಾಗಿತ್ತು ಹೊಸಾಜೀವನ ; ಪರಿಸರ-ಜನರು-ಭಾಷೆ ಪ್ರತಿಯೊಂದೂ ಹೊಸತೇ.

ರಾಮೋಜಿರಾವ್ ನ ಸಾಮ್ರಾಜ್ಯ ಫಿಲ್ಮ್ ಸಿಟಿ ಒಂದು ಮಾಯಾನಗರಿ ; ಸಿನೆಮಾ ಶೂಟಿಂಗ್ ಗಾಗಿ ಎತ್ತೆರೆತ್ತರದ ಬಿಲ್ಡಿಂಗ್ ಗಳು, ಅರಮನೆ, ಕೋಟೆಗಳು, ದೇಚಸ್ಥಾನ, ಜಗತ್ತಿನ ಬೇರೆ ಬೇರೆ ಸ್ಥಳಗಳ ಮಾದರಿಗಳು ಎಲ್ಲವನ್ನೂ ಕೃತಕವಾಗಿ ನಿರ್ಮಿಸಿ ಅದೇ ಪ್ರದೇಶ ಎಂಬ ಭ್ರಮೆ ಹುಟ್ಟಿಸುತ್ತಾರೆ. ಯಶೋಧಾ ಹಾಸ್ಪಿಟಲ್ ಎಂಬ ಬೋರ್ಡ್ ಇದ್ದ ದೊಡ್ಡ ಕಟ್ಟಡವೊಂದನ್ನು ಎಷ್ಟೋ ದಿನಗಳ ಕಾಲ ನಾನು ನಿಜವಾದ ಆಸ್ಪತ್ರೆ ಎಂದೇ ಭಾವಿಸಿದ್ದೆ!!!. ಪ್ರವಾಸಕ್ಕೆಂದು ಬರುವವರಿಗೆ ನಾನಾ ಬಗೆಯ ಆಟಗಳು, ಮನರಂಜನೆಗಳು, ಕಣ್ಮನ ತಣಿಸುವ ಸುಂದರ ಉದ್ಯಾನವನಗಳು ಜೊತೆಗೆ ಹದಿಮೂರು ಭಾಷೆಗಳ ಈಟಿವಿ ಛಾನಲ್ ಗಳ ಕಛೇರಿಗಳಿರುವುದೂ ಇಲ್ಲೇ. ಮನೆಯಲ್ಲಿದ್ದಾಗ ಕೆಲವು ಧಾರಾವಾಹಿಗಳನ್ನ ನೋಡುತ್ತಿದ್ದ ನನಗೆ ಆ ವಿಭಾಗದಲ್ಲಿಯೇ ಕೆಲಸ ಸಿಕ್ಕಿದ್ದು ವಿಶೇಷ. ಮನೆಯಲ್ಲಿ ಆರಾಮಾಗಿ ಕುಳಿತು ಟೀವಿ ನೋಡುತ್ತಿದ್ದ ನನಗೆ ಅದರ ಹಿಂದೆ ಎಷ್ಟೆಲ್ಲ ಜನರ ಶ್ರಮ, ಏನೆಲ್ಲಾ ತಯಾರಿಗಳಿರುತ್ತವೆ ಎಂದು ಗೊತ್ತಾಗಿದ್ದೇ ಆಗ; ಒಟ್ಟಿನಲ್ಲಿ ಹೊಸಾ ರೀತಿಯ ಕೆಲಸ, ಹೊಸಾ ಅನುಭವ . . .

ಐದಾರು ಜನ ಸ್ನೇಹಿತರು ಸೇರಿಕೊಂಡು ಬಾಡಿಗೆ ಮನೆಗಾಗಿ ಅಲೆದಿದ್ದು.ಮನೆ ಸಿಕ್ಕ ನಂತರ ಮಲಗಲು ಹಾಸಿಗೆ-ತಡಿಗಾಗಿ ಕಷ್ಟಪಟ್ಟಿದ್ದು, ಅಂಗಡಿಗಳಿಗೆ ಏನಾದರೂ ತರಲು ಹೋದಾಗ ಭಾಷೆ ಬರದೆ ಒದ್ದಾಡಿದ್ದು ಎಲ್ಲವೂ ವಿಭಿನ್ನ ಅನುಭವಗಳೇ. ಬೆಂಗಳೂರಿನ ಹಾಗೆ ಅಲ್ಲಿ ಬಾಡಿಗೆ ಮನೆಗೆ ಹೆಚ್ಚು ಹಣ ಇಲ್ಲ, ಜೊತೆಗೆ ಅಡ್ವಾನ್ಸ್ ಎಂದು ಸಾವಿರಾರು ರೂಪಾಯಿ ಸುರಿಯಬೇಕಾಗಿಲ್ಲ, ಒಂದು ತಿಂಗಳ ಬಾಡಿಗೆಯನ್ನು ಹೆಚ್ಚು ಕೊಟ್ಟರಾಯಿತಷ್ಟೆ. ಚಿಕ್ಕ ಮನೆಯನ್ನು ಬಾಡಿಗೆಗೆ ಪಡೆದು ಆರಾಮಾಗಿ ಇರಬಹುದು ; ಜೀವನನಿರ್ವಹಣಾವೆಚ್ಚವೂ ಬೆಂಗಳೂರಿಗೆ ಹೋಲಿಸಿದಾಗ ತುಂಬ ಕಡಿಮೆಯೇ ; ಇಲ್ಲಿ ಪ್ರತಿಯೊಂದಕ್ಕೂ ಹೆಚ್ಚು ಹಣ ಸುರಿಯುವಾಗ ಅಲ್ಲಿಯ ದಿನಗಳು, ಸಂಜೆಗಳು ನೆನಪಾಗುತ್ತವೆ.

ಆರ್ಥಿಕ ಸ್ವಾವಲಂಬನೆ ಮನುಷ್ಯನಿಗೆ ಒಂದು ರೀತಿಯ ನೆಮ್ಮದಿ-ವಿಶ್ವಾಸವನ್ನು ಕೊಡುತ್ತದಂತೆ ; ಮೊದಲ ಸಂಬಳ ಪಡೆದಿದ್ದು, ಅದರಲ್ಲಿ ಮೊಬೈಲ್ ತೆಗೆದುಕೊಂಡಿದ್ದು, ಮೊದಲ ಬಾರಿ ಊರಿಗೆ ಬರುವಾಗ ಅಮ್ಮನಿಗೆ ಸೀರೆ ತಂದಿದ್ದು ಎಲ್ಲವೂ ಖುಷಿ ಕೊಡುವ ನೆನಪುಗಳೇ. ಅಲ್ಲಿ ಕಳೆದಷ್ಟು ದಿನ ಯಾವ ಕಟ್ಟುಪಾಡುಗಳೂ ಇರಲಿಲ್ಲ ; ನನ್ನದೇ ಚಿಕ್ಕ ಮನೆ, ಕೆಲಸ, ಖರ್ಚಿಗೆ ದುಡ್ಡು, ಮನಸೋ ಇಚ್ಛೆ ಅಲೆಯುವುದು . . . . . . ಸ್ವಾತಂತ್ರ್ಯದ ಪರಮಾವಧಿಯನ್ನು ಅನುಭವಿಸಿದ ದಿನಗಳವು.

ಯಾಕೆ ಹೀಗೆ ಹೇಳುತ್ತಿರುವುದೆಂದರೆ ನಮ್ಮ ಸಮಾಜದಲ್ಲಿ ಹುಡುಗಿಯರಿಗೆ ನಿರ್ಬಂಧಗಳು ಜಾಸ್ತಿ ; ಎಲ್ಲಿಗೋ ಹೋಗಬೇಕು, ಯಾರನ್ನೋ ಭೇಟಿ ಮಾಡಬೇಕು, ಏನನ್ನಾದರೂ ಮಾಡಬೇಕು ಎಂದರೆ ನೂರೆಂಟು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ, ಅನುಮಾನದ ನೋಟಗಳನ್ನು ಎದುರಿಸಬೇಕಾಗುತ್ತದೆ; ತಮ್ಮಿಚ್ಛೆಯಂತೆ ಬದುಕನ್ನು ರೂಪಿಸಿಕೊಳ್ಳುವುದು, ಬದುಕುವುದು ಅಷ್ಟು ಸುಲಭವಲ್ಲ ; ಬದುಕೆಂದರೆ ಇಷ್ಟೇ, ಹೀಗೇ ಇರಬೇಕು ಎಂದು ಮಿತಿಗಳನ್ನು ಹಾಕುತ್ತಾರೆ ; ಮಿತಿಗಳಲ್ಲಿ ಬದುಕುವುದು ನನಗಿಷ್ಟವಿಲ್ಲ, ನನ್ನ ಮನೋಭಾವಕ್ಕೆ ಒಗ್ಗುವಂತಹುದೂ ಅಲ್ಲ. ಪ್ರಪಂಚ ವಿಶಾಲವಾಗಿದೆ ; ಎಷ್ಟೊಂದು ಹೊಸ ವಿಷಯಗಳಿವೆ, ವಸ್ತುಗಳಿವೆ, ಅಚ್ಚರಿಗಳಿವೆ ; ಇರುವುದೊಂದೇ ಬದುಕು, ಸಾಧ್ಯವಾದಷ್ಟೂ ವಿಶಿಷ್ಟ-ವಿಭಿನ್ನ ಅನುಭವಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು, ತಿಳಿದುಕೊಳ್ಳಬೇಕು, ಸಮೃದ್ಧಗೊಳಿಸಿಕೊಳ್ಳಬೇಕು ; ಹಿಂಜರಿದರೆ ಎಷ್ಟೋ ಅದ್ಭುತ ಎನಿಸುವಂಥ, ಖುಷಿ ಕೊಡುವಂಥ ಅನುಭವಗಳಿಂದ ವಂಚಿತರಾಗಬೇಕಾಗುತ್ತದೆ. ಹೀಗಾಗಿಯೇ ನನಗೆ ಆ ದಿನಗಳು ವಿಶೇಷವೆನಿಸಿದ್ದು, ಪದೇ ಪದೇ ಕಾಡುವುದೂ ಕೂಡಾ.