Sunday, January 3, 2010

ಹೊಸ ವರ್ಷ ಹೊಸ ಹುಮ್ಮಸ್ಸು . . .

2009 ಮುಗಿದು 2010 ಬಂದೇ ಬಿಡ್ತು; ಮತ್ತೊಂದು ಹೊಸ ವರ್ಷ. ಕಾಲ ನಿಲ್ಲುವುದಿಲ್ಲ, ತನ್ನ ಪಾಡಿಗೆ ತಾನು ಮುಂದೆ ಸಾಗುತ್ತಲೇ ಇರುತ್ತದೆ. ಯಾರ ಯಾವ ಮುಲಾಜೂ ಇಲ್ಲ; ಮನಸ್ಸಿನ ಆಲಸ್ಯಕ್ಕೋ ದೇಹದ ಜಡತ್ವಕ್ಕೋ ಕಟ್ಟುಬಿದ್ದು ಹಿಂದೆ ಬೀಳುವವರು ನಾವೇ. ಮಾಡಬೇಕೆಂದುಕೊಂಡಿದ್ದ ಎಷ್ಟೋ ಕೆಲಸಗಳನ್ನು ಮುಂದೂಡುವ ಚಾಳಿ, ಕೊನೆಗವು ಅಲ್ಲೇ ಬಾಕಿ.


ಮೊನ್ನೆ ಹೀಗಾಯಿತು; ಸ್ನೇಹಿತರೊಬ್ಬರು anniversary  ಆಚರಿಸಿಕೊಂಡ್ರಾ? ಅಂಥ ಮೆಸೇಜ್ ಕಳಿಸಿದ್ದರು. ಮದುವೆಯಾದ ದಿನ ಇನ್ನೂ ದೂರ ಇದೆಯಲ್ಲಾ... ಯಾಕೆ? ಅಂಥ ಅರ್ಥ  ಆಗಲಿಲ್ಲ. ಕೊನೆಗೆ ಗೊತ್ತಾಗಿದ್ದು ನಾನು ಬ್ಲಾಗ್ ಗೆ ಬರೆಯದೆ ಆಗಲೇ ಒಂದು ವರ್ಷ ಕಳೆದಿದೆ! ಮನಸ್ಸಿಗೆ ಪಿಚ್ಚೆನೆಸಿತು; ಒಂದು ವರ್ಷ ಕಡಿಮೆ ಕಾಲಾವಧಿಯೇನಲ್ಲ; ಏನು ಮಾಡಿದೆ ನಾನು . . . .?

ಮದುವೆಯ ನಂತರದ ಬದಲಾದ ಜೀವನಕ್ಕೆ ಹೊಂದಿಕೊಳ್ಳುವ ತಹತಹ,  ಒಂದಷ್ಟು ದಿನ  ಏನೋ ಬೇಸರ, ಮತ್ತೊಂದಿಷ್ಟು ದಿನ ಕೋಪ-ತಾಪ, ಆಫೀಸಿಗೆ ಹೊರಡುವ ಗಡಿಬಿಡಿ,  ಅಲ್ಲೇನೋ ಕಿರಿಕಿರಿ, ಸಂಜೆ ಮನೆಗೆ ಬಂದರೆ ಅಡುಗೆ ಮಾಡುವ ತರಾತುರಿ, ಊಟ ಆಯ್ತೋ ಮತ್ತೆ ಮರುದಿನದ ತಿಂಡಿ-ಅಡುಗೆಗೆ ತಯಾರಿ; ವೀಕೆಂಡಲ್ಲಿ ಮನೆ ಕ್ಲೀನಿಂಗ್, ಬಟ್ಟೆ ವಾಷಿಂಗ್, ಬೋರಾಯ್ತು ಅಂಥ ಸ್ವಲ್ಪ ಶಾಪಿಂಗ್, ಮುಂದಿನಾ ವಾರಕ್ಕೆ ಬೇಕಾಗೋ ಸಾಮಾನು-ತರಕಾರಿಗಳನ್ನು ಫ್ರಿಜ್ ನಲ್ಲಿ ತುಂಬಿಸಿಡೋ ತಲೆಬಿಸಿ, ಇವುಗಳ ಮಧ್ಯೇನೇ ಸ್ವಲ್ಪ ರೋಮಾನ್ಸ್, ಹಿಂದೇನೇ ಅವನ ಜೊತೆ ಜಗಳ-ಮುನಿಸು, ಒಂದು ಬೇಸರದಿಂದ ಇನ್ನೇನು ಹೊರಗೆ ಬಂದೆ ಎನ್ನುವಷ್ಟರಲ್ಲಿ  ಮತ್ತೊಂದು ದುಗುಡ, ಒಂಥರಾ ಡಿಪ್ರೆಷನ್  . . . . .


ಹೀಗೆ ಕಳೆದೇ ಹೋಗಿದ್ದೆ ನಾನು. ಬರೆಯುವುದಕ್ಕೆ ವಿಷಯಗಳು, ಘಟನೆಗಳು, ಅನುಭವಗಳು ಇರಲಿಲ್ಲ ಅಂಥಲ್ಲ; ಬರೀಬೇಕು ಅನ್ನಿಸಿದಾಗ ಟೈಮ್ ಸಿಗಲ್ಲ, ಟೈಮ್ ಇದ್ದಾಗ ಬರೆಯುವ ಮೂಡ್ ಇರಲ್ಲ, ಕೆಲವು ದಿನಗಳ ನಂತರ ಎರಡೂ ಸಿಕ್ಕಿ  ಕುಳಿತುಕೊಂಡಾಗ ಆ ತೀವ್ರತೇನೇ  ಇರಲ್ಲ!  ಹೀಗಾಗಿ ಭಾವನೆಗಳೇ ಹೊಮ್ಮಲ್ಲ, ಅಕ್ಷರಗಳೇ ಮೂಡಲ್ಲ.  ಅದೇನೋ ಗೊತ್ತಿಲ್ಲ, ಎಲ್ಲರೂ ಬರೆಯುವ ಹಾಗೆ ಬರೀಬೇಕು ಅಂದುಕೊಂಡಿದ್ದನ್ನೆಲ್ಲಾ ಅಂದುಕೊಂಡಾಗಲೆಲ್ಲಾ ಬರೆದು ಬಿಸಾಕಕ್ಕೆ ನನ್ನಿಂದ ಆಗೋದೇ ಇಲ್ಲ; ತುಂಬ ತಿಣುಕಾಡಬೇಕು, ಕೆಲವೊಮ್ಮೆ ಎಷ್ಟು ಒದ್ದಾಡಿದರೂ ಮನಸ್ಸಿನಲ್ಲಿನ ಭಾವ, ಚಡಪಡಿಕೆ ಅಕ್ಷರ ರೂಪಕ್ಕಿಳಿಯುವುದೇ ಇಲ್ಲ.  ಈ ರೀತಿಯ ಒತ್ತಡ, ಗೊಂದಲದಲ್ಲಿಯೇ ದಿನ-ವಾರ-ತಿಂಗಳುಗಳನ್ನ ಹಾದು ಇಡೀ ವರ್ಷವನ್ನೇ ಕಳೆದುಬಿಟ್ಟಿದ್ದೇನೆ.


ಮತ್ತೊಂದು ನನ್ನನ್ನ ತುಂಬ ಕಾಡಿದ್ದು, ಗಂಡಸಿನಂತೆ ಹೆಂಗಸು ವೃತ್ತಿಜೀವನದಲ್ಲಿ ತನ್ನನ್ನ ತಾನು ಸಂಪೂರ್ಣ ತೊಡಗಿಸಿಕೊಳ್ಳಲಾಗುವುದೇ ಇಲ್ಲ; ಮನೆಯ ಸಮಸ್ಯೆ -ಕೆಲಸಗಳು ಅವಳ ಶ್ರಮ-ಸಾಮಾರ್ಥ್ಯ-ಸಮಯದಲ್ಲಿ  ಪಾಲು ತೆಗೆದುಕೊಳ್ಳುತ್ತಿರುತ್ತವೆ. ಹಾಗೆಯೇ ಮನೆಯಲ್ಲಿಯೂ ಆಫೀಸಿನ ಸ್ಫರ್ಧೆ, ಒತ್ತಡದಿಂದಾಗಿ ಒಳ್ಳೆಯ ಹೆಂಡತಿ-ತಾಯಿ-ಗೃಹಿಣಿ ಎನ್ನಿಸಿಕೊಳ್ಳುವುದು ಕಷ್ಟ; ಎರಡೂ ಕಡೆಯೂ ಒಂದು average performance ಅಷ್ಟೆ. ಈ ಎಲ್ಲಾ ಗೋಜಲುಗಳ ನಡುವೆಯೇ ಸೃಜನಶೀಲ ಹಸಿವಿರುವವರು ಹೊಸಾ ಹೊಸಾ ಪುಸ್ತಕಗಳನ್ನೋದುವುದಕ್ಕೆ, ಬರೆಯುವುದಕ್ಕೆ, ನಾಟಕ-ಸಿನೆಮಾ ನೋಡುವುದಕ್ಕೆ, ಹೊಸಾ ವಿಷಯಗಳನ್ನು ಕಲಿಯುವುದಕ್ಕೆ ಸಮಯವನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಬದುಕು ನಿಂತ ನೀರಿನ ತರಹ, no progress no ಉತ್ಸಾಹ . . . ಜೊತೆಗೆ ಕಾಲದಿಂದ ಕಾಲಕ್ಕೆ update ಆಗುತ್ತಿಲ್ಲದಿದ್ದರೆ , ಹೊರ ಪ್ರಪಂಚಕ್ಕೆ ಕಣ್ಣು-ಕಿವಿ ತೆರೆದುಕೊಳ್ಳದಿದ್ದರೆ ಇಂದಿನ ಸ್ಫರ್ಧಾಯುಗದಲ್ಲಿ ಉಳಿದುಕೊಳ್ಳುವುದು ಕಷ್ಟ.  ಇವೆಲ್ಲದರ ನಡುವೆ ಮನಸ್ಸಿನಲ್ಲಿದ್ದಿದ್ದನ್ನು ಹೊರಗೆ ಹಾಕುವ, ಹೊರಜಗತ್ತಿಗೆ ನಮ್ಮನ್ನ ತೆರೆದುಕೊಳ್ಳುವ ಬರವಣಿಗೆ ನನ್ನ ಪಾಲಿಗೆ ಒಂಥರಾ ರಿಲ್ಯಾಕ್ಸೇಶನ್ ನೀಡುವ ಬದುಕಿಗೆ ಉತ್ಸಾಹವನ್ನು ತುಂಬುವ ಕ್ರಿಯೆ. ಹೀಗೆ ಹೇಳ್ತಿರಬೇಕಾದ್ರೆ ಕಥೆಗಾರ್ತಿ ಸುನಂದಾ ಪ್ರಕಾಶ ಕಡಮೆಯವರು ಹೇಳಿದ ಮಾತುಗಳು ನೆನಪಿಗೆ ಬರ್ತಿವೆ - "ಈ ಓದು-ಬರವಣಿಗೆಯ ಸಾಂಗತ್ಯವೆಂದರೆ ಒಂದು ಸತ್ಸಂಗವೇ ಏನೋ. ಯಾಕೆಂದರೆ ಇದನ್ನು ಆರಂಭಿಸುವುದಕ್ಕಿಂತ ಮೊದಲು ನಾನು ಎಂಥದೋ ಅತೃಪ್ತಿ ಅಸಹನೆ ಅಸಮಧಾನದಿಂದ ಬಳಲುತ್ತಿದ್ದೆ. ಆದರೀಗೆ ಅವೆಲ್ಲ ಇದ್ದಕ್ಕಿದ್ದಂತೆ ಮಾಯವಾಗಿ ಒಂದು ರೀತಿಯ ನೆಮ್ಮದಿ ಆವರಿಸಿಕೊಂಡಂತಿದೆ.  ಖುಷಿಯಾಗಿದ್ದೇನೆ. ಒಂದು ಕಥೆ ಬರೆದು ಮುಗಿಸಿದ ನಂತರ ಸಿಗುವ ಸಂತೃಪ್ತಿಗೆ ಸಮನಾದುದು ಯಾವುದೂ ಇಲ್ಲ. ನನ್ನ ಬರವಣಿಗೆ ನನಗೆ ಸುತ್ತ ಎಲ್ಲರ ಪ್ರೀತಿ ಗೌರವ ತಂದುಕೊಟ್ಟಿದೆ. ಈ ಕಾರಣಕ್ಕೆ ಬರವಣಿಗೆಗೆ ನಾನು ಸದಾ ಋಣಿಯಾಗಿದ್ದೇನೆ".


ಹೀಗಾಗಿ ಈ ವರ್ಷ ಆದ್ರೂ ಸ್ವಲ್ಪ ಬರೀಬೇಕು, ಕ್ರಿಯಾಶೀಲವಾಗಿರಬೇಕು, ಬ್ಲಾಗನ್ನ ಜೀವಂತವಾಗಿಟ್ಟಿರಬೇಕು ಎಂದುಕೊಂಡಿದ್ದೇನೆ; ಆದ್ರೆ ಇದು ಆರಂಭ ಶೂರತ್ವ ಆಗದಿದ್ರೆ ಸಾಕು. ಯಾಕಂದ್ರೆ ಬ್ಲಾಗ್ ಆರಂಭಿಸಿದಾಗ ಅದೇನು ಖುಷಿ, ಉತ್ಸಾಹ; ಯಾರಾದ್ರೂ ಓದಿದ್ದಾರಾ? ಕಾಮೆಂಟ್ ಮಾಡಿದ್ದಾರಾ? ಎಂದು ಪದೇ ಪದೇ ಹೋಗಿ ನೋಡುವುದು; ಕಾಮೆಂಟ್ ಕಂಡರೆ ಒಂಥರಾ ಸಾರ್ಥಕತೆಯ ಭಾವ! ನಂತರದ ದಿನಗಳಲ್ಲಿ ಹುಮ್ಮಸ್ಸು ಠುಸ್ . . . ಈ ವರ್ಷ ಹಾಗಾಗದಿರಲಿ  ಅಂಥ ನನಗೆ ನಾನೇ ಹಾರೈಸಿಕೊಳ್ತೇನೆ. ನನ್ನನ್ನು ಎಚ್ಚರಿಸಿ ಈ ವರ್ಷ ಸಂಭ್ರಮಿಸುವ ಕ್ಷಣಗಳು ಹೆಚ್ಚಾಗಲಿ ಎಂದು ಹಾರೈಸಿದ ಕುಮಾರ್ ಗೂ ಒಂದ್ರಾಶಿ ಥ್ಯಾಂಕ್ಸ್ ಜೊತೆಗೆ ಹೊಸ ವರ್ಷ ಹೊಸಾ ಹೊಸಾ ಅವಕಾಶಗಳನ್ನು ತೆರೆದು ಖುಷಿ ಹೆಚ್ಚಿಸಲಿ ಎನ್ನುವ ಶುಭ ಹಾರೈಕೆ.

Tuesday, December 9, 2008

ಯಾರು ಇರಲಿ, ಬಿಡಲಿ ಬದುಕಿನ ಚಕ್ರ ಉರುಳಲೇಬೇಕು . . .

ಹೀಗೇ ಒಂದು ಸಂಜೆ, ಆಫೀಸ್ ಮುಗಿಸಿ, ಎಂದಿನಂತೆ ಮನೆಗೆ ಹೋಗಲು ಶಿವಾಜಿನಗರದ ಬಸ್ ಸ್ಟ್ಯಾಂಡಿನಲ್ಲಿ ನಿಂತಿದ್ದೆ ; ತುಂಬ ಜನಜಂಗುಳಿ-ರಶ್, ಬಸ್ ಬಂದ ತಕ್ಷಣ ಹತ್ತಲು, ಹೇಗಾದರೂ ಸರಿ ಒಂದು ಸೀಟು ಗಿಟ್ಟಿಸಲು ಜನ ಗುಂಪು ಗುಂಪಾಗಿ ಕಾದು ನಿಂತಿದ್ದರು. ಇಷ್ಟೆಲ್ಲಾ ಜನರ ಮಧ್ಯೆ ಸೀಟು ಹಿಡಿಯುವುದು ಹೇಗಪ್ಪಾಎನ್ನುವ ಚಿಂತೆ, ಅಸಹನೆಯೊಂದಿಗೆ ನಾನೂ ಮೈಯ್ಯೆಲ್ಲ ಕಣ್ಣಾಗಿ ಕಾಯುತ್ತಿದ್ದೆ, ಇದು ಪ್ರತಿದಿನದ ಗೋಳು. ಈಗ ಸ್ವಲ್ಪ ರೂಢಿಯಾಗಿದ್ದರೂ ಬೆಂಗಳೂರಿಗೆ ಬಂದ ಹೊಸತರಲ್ಲಿ ಈ ಸಿಟಿಬಸ್ಸುಗಳಲ್ಲಿ ಓಡಾಡುವ ಹಿಂಸೆಯಿಂದ ಕಂಗಾಲಾಗಿ ಹೋಗಿದ್ದೆ. ಬೆಳಿಗ್ಗೆ ಆಫೀಸಿಗೆ ಹೋಗುವ ಸಮಯದಲ್ಲಿ ಒಂದರ ಹಿಂದೊಂದು ಬಸ್ಸು ಬಂದರೂ ಎಲ್ಲದರಲ್ಲೂ ಕಾಲು ಹಾಕಲೂ ಜಾಗವಿಲ್ಲದಷ್ಟು ಜನರು, ನಿಂತರೆ ನಿಂತೇ ಇರಬೇಕಾಗುತ್ತದೆ ಎಂದು ಹೇಗೋ ನುಗ್ಗಿ ಹತ್ತಿಕೊಂಡರೆ , ಇನ್ನೊಂದು ಬಸ್ಸಿಗೆ ಬರಕ್ಕಾಗಲ್ವೇನ್ರೀ? ಜಾಗ ಇಲ್ಲದೇ ಇದ್ರೂ ಹತ್ತಿಬಿಡ್ತೀರಿ, ಮುಂದೆ ಹೋಗಿ,
ಇಲ್ಲಾ ಇಳೀರಿ ಎನ್ನುವ ಡ್ರೈವರ್ ಗಳ ಧಮಕಿ, ನನಗಂತೂ ತೆಗೆದು ಬಾರಿಸಿಬಿಡಬೇಕು ಎನ್ನುವಷ್ಟು ಸಿಟ್ಟು ಬರುತ್ತಿತ್ತು. ಒಳಗೆ ನುಗ್ಗಿದರೆ ಆಧಾರಕ್ಕೆ ಹಿಡಿದುಕೊಳ್ಳಲು ಕಷ್ಟ, ಉಸಿರಾಡಲು ಸರಿಯಾಗಿ ಗಾಳಿ ಇಲ್ಲದೆ ಒಂಥರಾ ಬಿಸಿಬಿಸಿ ಫೀಲ್, ಬೆವರು ವಾಸನೆ, ಆಚೀಚೆ ಸ್ವಲ್ಪ ಜರುಗಿದರೂ ಪಕ್ಕದಲ್ಲಿದ್ದವರ ಅಸಹನೆ, ಇದರ ನಡುವೆ ಕಂಡಕ್ಟರ್ ನ ಬ್ಯಾಗ್ ಆಚೆ ಇಟ್ಟುಕೊಳ್ರಿ, ಹಿಂದೆ ಬನ್ರಿ, ಸರಿಯಾಗಿ ಚಿಲ್ಲರೆ ಕೊಡಕ್ಕಾಗಲ್ವಾ ಮುಂತಾದ ಗೊಣಗಾಟ . . . ಅವರ ಒತ್ತಡಗಳೇನೆ ಇರಲಿ, ಪ್ರಯಾಣಿಕರ ಜೊತೆ ಡ್ರೈವರ್-ಕಂಡಕ್ಟರ್ ಗಳ ರೂಡ್ ಬಿಹೇವಿಯರ್ ಬಗ್ಗೆ ನನ್ನ ತಕರಾರಿದೆ. ಏನೇನೋ ಸಮಸ್ಯೆ ಟೆನ್ ಶನ್ ಗಳ ಮಧ್ಯೆ ಬೆಳಿಗ್ಗೆ ಬೆಳಿಗ್ಗೇನೆ ಇವರ ಅರಚಾಟ ಸಹಿಸಿಕೊಳ್ಳುವುದು ನಮಗ್ಯಾವ ಕರ್ಮ ?!!
ಹೀಗೆ ಯೋಚಿಸುತ್ತಿರುವಾಗ ಒಂದು ಅಜ್ಜ-ಅಜ್ಜಿ ನಾನು ನಿಂತಿರುವಲ್ಲಿಗೆ ಬಂದರು. ನನಗೆ ಅವರನ್ನು ನೋಡಿ ಪಾಪ ಅನಿಸಿತು ;
ಬಸ್ಸು ಬಂದಾಗ ಉಂಟಾಗುವ ನೂಕುನುಗ್ಗಲಿನಲ್ಲಿ ಕೈಕಾಲು ಗಟ್ಟಿಯಿರುವ ನಮ್ಮಂಥವರಿಗೇ ಹತ್ತುವುದು ಪ್ರಯಾಸದ ಕೆಲಸ, ಹೀಗಿರುವಾಗ ಇವರು ಹೇಗೆ ಹತ್ತುತ್ತಾರೋ ಎಂದು ಕನಿಕರಿಸಿದೆ. ಬಸ್ಸಿನಲ್ಲಿ ಹಿರಿಯ ನಾಗರೀಕರಿಗೆ ಎಂದು ಒಂದು ಸೀಟನ್ನು ಮೀಸಲಿಟ್ಟಿದ್ದರೂ ಅಲ್ಲಿ ಬೇರೆಯವರ್ಯಾರೋ ಕುಳಿತಿರುತ್ತಾರೆ. ಅವರನ್ನು ಎಬ್ಬಿಸಿ ವಯಸ್ಸಾಗಿರುವವರನ್ನು ಕೂರಿಸುವ ಸೌಜನ್ಯವನ್ನು ನಿರ್ವಾಕರೂ ತೋರಿಸುವುದಿಲ್ಲ, ತಾವಾಗೇ ಎದ್ದು ಬಿಟ್ಟುಕೊಡುವ ದೊಡ್ಡ ಮನಸ್ಸು ಕುಳಿತವರಿಗೂ ಇರುವುದಿಲ್ಲ.
ಐದು ನಿಮಿಷಗಳ ನಂತರ ಬಸ್ ಬಂದಾಗ ಯಥಾಪ್ರಕಾರ ಗದ್ದಲ, ತಳ್ಳಾಟ. ಹೆಂಗಸರು ಮುಂದಿನ ಬಾಗಿಲಲ್ಲೂ, ಗಂಡಸರು ಹಿಂದಿನ ಬಾಗಿಲಲ್ಲೂ ನುಗ್ಗಿದರು. ಪಾಪ ಅಜ್ಜಿಗೆ ಅಜ್ಜ ಹತ್ತುತ್ತಿದ್ದಾನೋ ಇಲ್ಲವೋ, ತಾನು ಹತ್ತಬೇಕೋ ಬಿಡಬೇಕೋ ಗೊತ್ತಾಗುತ್ತಿಲ್ಲ. ಗಾಬರಿಯಿಂದ ಆಚೀಚೆ ಹಿಂದಿಂದೆ ನೋಡುತ್ತಾ ಅನುಮಾನದಲ್ಲಿ ಕೊನೆಯಲ್ಲಿ ಹತ್ತಿಕೊಂಡಳು. ಇತ್ತ ಅಜ್ಜಿ ಹತ್ತೇ ಇಲ್ಲ ಎಂದು ಹತ್ತಿದ್ದ ಅಜ್ಜ ಹಿಂದಿನ ಬಾಗಿಲಿನಿಂದ ಇಳಿದ. ಆತ ಇಳಿಯುವುದಕ್ಕೂ ಬಸ್ಸು ಹೊರಡುವುದಕ್ಕೂ ಸರಿಯಾಯಿತು. ನೋಡಿದರೆ ಕೆಳಗೆ ಅಜ್ಜಿ ಇಲ್ಲ!! ನಿಧಾನ ಚಲಿಸುತ್ತಿದ್ದ ಬಸ್ಸಿನ ಪಕ್ಕ ಅಜ್ಜ ಕರೆಯುತ್ತಾ ಓಡಲಾರಂಭಿಸಿದ, ನನಗೆ ಅಯ್ಯೋ ಎನಿಸಿತು. ಒಳಗಿದ್ದ ಅಜ್ಜಿಗೂ ಅಜ್ಜ ಕಾಣದೆ ಆತಂಕವಾಗಿರಬೇಕು. ನಿರ್ವಾಹಕ ಬಸ್ಸು ನಿಲ್ಲಿಸಿದಾಗ ಏದುಸಿರು ಬಿಡುತ್ತಿದ್ದ ಅಜ್ಜ ಅಜ್ಜಿಯನ್ನು ಕರೆದು ಕೈ ಹಿಡಿದು ಇಳಿಸಿಕೊಂಡ. ಇಳಿವಯಸ್ಸಿನ ಈ ಎರಡು ಜೀವಗಳ ಕಷ್ಟ ಮನ ಕಲಕಿತು. ಆಟೋದಲ್ಲಿ ಹೋಗಲು ದುಡ್ಡಿಲ್ಲದವರು, ಸ್ವಂತ ವಾಹನಗಳ ಸೌಕರ್ಯವಿಲ್ಲದವರು ಪರದಾಡಿಕೊಂಡು ಬಸ್ಸಿನಲ್ಲೇ ಹೋಗಬೇಕು. ಈ ಅನಿವಾರ್ಯತೆ, ಅಸಹಾಯಕತೆ ನನ್ನನ್ನು ಬಹಳ ಹೊತ್ತಿವರೆಗೆ ಕಾಡಿತು.
ಈ ಅಜ್ಜ-ಅಜ್ಜಿ ಜನರ ಗುಂಪಿನಲ್ಲಿ ಮರೆಯಾಗುತ್ತಿದ್ದಂತೆ ನನಗೆ ನನ್ನಜ್ಜಿ ನೆನಪಾದಳು. ನಾನವಳನ್ನು ಕರೆಯುತ್ತಿದುದು 'ಅಮ್ಮಮ್ಮ' ಎಂದು. ತುಂಬ ಮಡಿ ಅಜ್ಜಿ ಅವಳು. ನಮ್ಮನ್ನ್ಯಾರನ್ನೂ ಅಡಿಗೆಮನೆಗೇ ಸೇರಿಸುತ್ತಿರಲಿಲ್ಲ. ಕೈ ತೊಳೆಯದೆ ಯಾವ ಪಾತ್ರೆ-ಲೋಟಗಳನ್ನೂ ಮುಟ್ಟುವಂತಿರಲಿಲ್ಲ, ನಾವಾಗೆ ನೀರು ತೆಗೆದುಕೊಂಡು ಕುಡಿಯುವಂತಿರಲಿಲ್ಲ, ಅನ್ನ ಮುಸುರೆ, ಹಾಗಾಗಿ ಅನ್ನ ಮುಟ್ಟಿದ ಕೈಯ್ಯಲ್ಲಿ ಬೇರೆ ಪದಾರ್ಥಗಳನ್ನು ಮುಟ್ಟುವಂತಿಲ್ಲ, ಜೊತೆಗೆ ಶಾಲೆಗೆ ಹೋಗುವಾಗ ಬ್ಯಾಗೆಲ್ಲಾ ಮುಸುರೆಯಾಗುತ್ತದೆಯಾದ್ದರಿಂದ ಬರೀ ಗೋಧಿಯಲ್ಲಿ ಮಾಡಿದ ತಿಂಡಿಗಳನ್ನೇ ತೆಗೆದುಕೊಂಡು ಹೋಗಬೇಕು. ಏಕಾದಶಿ, ಸೋಮವಾರ, ಗುರುವಾರ ಎಂದು ಕೆಲವು ತರಕಾರಿ, ತಿಂಡಿಗಳು ಕೆಲವು ನಿರ್ದಿಷ್ಡ ದಿನಗಳಂದು ನಿಷಿದ್ಧ . . .ಹೀಗೆ ನೂರೆಂಟು ತಾಪತ್ರಯಗಳು.
ಒಮ್ಮೆಯಂತೂ ನಮ್ಮನೆಯ ಕೊಟ್ಟಿಗೆ ಸಗಣಿ ತೆಗೆಯುವ ಹುಡುಗಿಯ ಪುಟ್ಟಮಗಳು ನೀರಿನ ನಲ್ಲಿಯನ್ನು ಮುಟ್ಟಿದ್ದಕ್ಕೆ ದೊಡ್ಡ ರಂಪಾಟವನ್ನೇ ಮಾಡಿದ್ದಳು. ತೋಟದಲ್ಲಿ ಕೆಲಸ ಮಾಡುವ ಆಳುಗಳನ್ನು ಮುಟ್ಟಿಸಿಕೊಳ್ಳುತ್ತಾನೆ ಎಂದು ಅಪ್ಪನ ಜೊತೆಗೂ ಸದಾ ಜಗಳ. ಎಲ್ಲರ ಮೈಯ್ಯಲ್ಲಿ ಹರಿಯುವ ರಕ್ತ ಒಂದೇ, ಮೆಟ್ಟುವ ಭೂಮಿ ಒಂದೇ, ಉಸಿರಾಡುವ ಗಾಳಿ ಒಂದೇ ಎಂದು ಚಿಕ್ಕಂದಿನಲ್ಲಿ ಪುಸ್ತಕಗಳಲ್ಲಿ ಓದಿದ್ದನ್ನ ಎಷ್ಟೋ ಸಾರಿ ನಾನು ಹುಮ್ಮಸಿನಿಂದ ಭಾಷಣ ಬಿಗಿಯುತ್ತಿದ್ದೆ ; ಆವಾಗೆಲ್ಲ ಅಮ್ಮಮ್ಮನದು ಒಂದೇ ನಿರ್ದಿಷ್ಟ ಉತ್ತರ "ಕೆಲವೊಂದಕ್ಕೆ ದೋಷವಿಲ್ಲ", ವಾದವನ್ನು ಹೇಗೆ ಮುಂದುವರೆಸುವುದು? ಪೆಚ್ಚಾಗಿ ಸುಮ್ಮನಾಗುತ್ತಿದ್ದೆ.
ಅಡುಗೆಮನೆಯಲ್ಲಿ ಅಮ್ಮ ಸರಿಯಾಗಿ ಮಡಿ ಮಾಡುವುದಿಲ್ಲ ಎಂದು ಕೆಲವೊಮ್ಮೆ ಅವಳ ಜೊತೆಗೂ ತಕರಾರು ; ಈಗಿನ ಕಾಲದಲ್ಲಿ ತುಂಬ ಮಡಿಯನ್ನು ಯಾರು ಅನುಸರಿಸುತ್ತಾರೆ ಹೇಳಿ? ಆದರೂ ಅಮ್ಮ ತಕ್ಕಮಟ್ಟಿಗೆ ಅನುಸರಿಸಿಕೊಂಡು ಹೋಗುತ್ತಿದ್ದಳಾದರೂ ಒಮ್ಮೊಮ್ಮೆ ಅಮ್ಮಮ್ಮನ ಕಿರಿಕಿರಿ ಸಾಕಾಗಿ ಕೂಗಾಡುತ್ತಿದ್ದಳು. ಆವಾಗೆಲ್ಲ ನಾನು, ನಿನ್ನ ಮಗಳಾಗಿದ್ದಕ್ಕೇ ಇಷ್ಟಾದರೂ ಮಾತು ಕೇಳುತ್ತಾಳೆ, ಎಲ್ಲಾದರೂ ಈ ಮನೆಗೆ ಸೊಸೆ ಬಂದಿದ್ದರೆ ಏನಾಗುತ್ತಿತ್ತೋ ಎಂದು ತಮಾಷೆ ಮಾಡುತ್ತಿದ್ದೆ. ನಾನಾದರೂ ಅಮ್ಮಮ್ಮನ ಎಷ್ಟೋ ನಿಯಮಗಳನ್ನು ಇಷ್ಟವಾಗದಿದ್ದರೂ ಪಾಲಿಸುತ್ತಿದ್ದೆ ; ಆದರೆ ನನ್ನ ತಂಗಿ ಹೇಳಿದ ಮಾತುಗಳನ್ನು ಕೇಳದೆ ಅಮ್ಮಮ್ಮನನ್ನು ಗೋಳುಹೊಯ್ದುಕೊಳ್ಳುತ್ತಿದ್ದಳು ; ಪದೇ ಪದೇ ಕೈ ತೊಳೆದುಕೊಳ್ಳದೆ ಡಬ್ಬಿಗಳಿಂದ ತಾನೇ ಸಿಹಿತಿಂಡಿಗಳನ್ನ ತೆಗೆದುಕೊಂಡು ತಿನ್ನುತ್ತಿದ್ದಳು, ಸ್ನಾನ ಮಾಡದೆ ನನ್ನ ಮುಟ್ಟಬೇಡ ಎಂದರೂ ಬೇಕೆಂದೇ ಅವಳನ್ನು ಮುಟ್ಟಿ, ಮೈ ಮೇಲೆ ಬಿದ್ದು ಕಾಡಿಸುತ್ತಿದ್ದಳು.
ಅಮ್ಮಮ್ಮನಿಗೆ ದೇವರ ಮೇಲೆ ತುಂಬ ಭಕ್ತಿ ; ಬೇರೆ ಬೇರೆ ದೇವಸ್ಥಾನಗಳಲ್ಲಿ ಪೂಜೆ ಮಾಡಿಸಬೇಕು, ಇಷ್ಟು ಜನರಿಗೆ ಊಟ ಹಾಕಿಸಬೇಕು ಎಂದೆಲ್ಲಾ ಆಗಾಗ್ಗೆ ಹಠ ಮಾಡುತ್ತಿದ್ದಳು. ಅಪ್ಪ ತುಂಬ ಹೊತ್ತು ಪೂಜೆ ಮಾಡುವುದಿಲ್ಲ, ಬೇಗ ಮುಗಿಸಿಬಿಡುತ್ತಾನೆ, ಎಲ್ಲ ಮಂತ್ರಗಳನ್ನೂ ಹೇಳುವುದೇ ಇಲ್ಲ ಎಂದು ಅಪ್ಪನ ಮೇಲೂ ಅಸಮದಾನ. ಒಂದೇ, ಎರಡೇ ಅವಳ ರಗಳೆ. . .ಹೀಗೆ ತುಂಬ ವಿಷಯಗಳಲ್ಲಿ ತೊಂದರೆ ಎನಿಸುತ್ತಿದ್ದ, ಕಿರಿಕಿರಿ ಮಾಡುತ್ತಿದ್ದ ಅಮ್ಮಮ್ಮ ಒಂದು ದಿನ ಇದ್ದಕ್ಕಿದ್ದಂತೆ ಯಾವುದೇ ಮುನ್ಸೂಚನೆಯೂ ಇಲ್ಲದೆ ತೀರಿಕೊಂಡುಬಿಟ್ಟಳು. ಹಿತ್ತಿಲ ಅಂಗಳದ ತುಳಸಿಕಟ್ಟೆಯ ಬಳಿ ಬಿದ್ದವಳು ಮೇಲೇಳಲೇ ಇಲ್ಲ, ಮಾತಾಡಲೂ ಇಲ್ಲ.
ಸಾಯುವ ಮೊದಲು ಮೊಮ್ಮಗಳ ಮದುವೆ ಒಂದು ನೋಡಿಬಿಡಬೇಕು ಎಂದು ಬಹಳ ಆಸೆಯಿದ್ದರೂ ಎಂದೂ ನನ್ನನ್ನು ಮದುವೆ ಮಾಡಿಕೊ ಮಾಡಿಕೊ ಎಂದು ಪೀಡಿಸಿರಲಿಲ್ಲ ; ನಾನು ಕೆಲಸಕ್ಕೆಂದು ಹೈದರಾಬಾದಿಗೆ ಹೊರಟುನಿಂತಾಗಲೂ ಅಷ್ಟು ದೂರ ಹೋಗುವುದು ಇಷ್ಟವಿಲ್ಲದಿದ್ದರೂ ಬೇಡ ಎಂದು ನನ್ನ ಉತ್ಸಾಹಕ್ಕೆ ತಣ್ಣೀರೆರಚಿರಲಿಲ್ಲ ; ಗೇಟಿನ ಬಳಿ ನಿಂತು ಅಲ್ಲೇನಾದರೂ ಕಷ್ಟವಾದರೆ ತಕ್ಷಣ ಹೊರಟು ಬಂದುಬಿಡು ಎಂದು ಕಾಳಜಿ ತೋರಿಸಿದವಳು ಮೂರು ತಿಂಗಳ ನಂಯರ ನಾನು ಮರಳಿ ಬಂದಾಗ ಇರಲೇ ಇಲ್ಲ.
ಯಾವಾಗಲೂ ಅಷ್ಟೆ, ಇದ್ದಾಗ ಆ ವ್ಯಕ್ತಿಯ ಬೆಲೆ ಗೊತ್ತಾಗುವುದಿಲ್ಲ. ಇಲ್ಲದಿರುವಾಗ ಛೆ ಹಾಗೆ ಮಾಡಬೇಕಿತ್ತು, ಹೀಗೆ ಮಾಡಬಾರದಿತ್ತು ಎಂದೆಲ್ಲಾ ಕಾಡುವುದಕ್ಕೆ ಶುರುವಾಗುತ್ತದೆ. ಆದರೆ ಅಷ್ಟರಲ್ಲಿ ಕಾಲ ಮೀರಿರುತ್ತದೆ. ಮದುವೆ, ಉಪನಯನ, ಗೃಹಪ್ರವೇಶ ಎಂದು ಕರೆದಿರುತ್ತಿದ್ದ ನೆಂಟರ ಮನೆಗಳಿಗೆ ಹೋಗುವುದಕ್ಕೆ ಅಮ್ಮಮ್ಮನಿಗೆ ತುಂಬ ಹುರುಪು-ಉತ್ಸಾಹ ; ಶಾಲೆಗೆ ರಜಾ ಇದ್ದಾಗಲೆಲ್ಲಾ ನನ್ನನ್ನು ಜೊತೆಗೆ ಬರುವಂತೆ ದುಂಬಾಲು ಬೀಳುತ್ತಿದ್ದಳು. ನೆಂಟರ ಮನೆಗಳನ್ನು ಹತ್ತಿಳಿಯುವುದು ನನಗೆ ಬೋರು, ಹಾಗಾಗಿ ಹೋಗುತ್ತಲೇ ಇರಲಿಲ್ಲ. ಸ್ವಲ್ಪ ಚಿಕ್ಕವಳಿರುವಾಗ ಮಾತ್ರ ಪ್ರತಿವರ್ಷ ಶಿವರಾತ್ರಿಯಂದು ಅವಳ ಜೊತೆ ಕೆಳದಿಯ ದೇವಸ್ತಾನಕ್ಕೆ ಹೋಗುತ್ತಿದ್ದೆ ; ಬುದ್ಧಿ ಬೆಳೆದಿದ್ದೇ ದೇವರ ಮೇಲಿನ ಭಕ್ತಿ-ಉತ್ಕಟತೆ ಕಡಿಮೆಯಾಗಿ ಬಿಟ್ಟುಬಿಟ್ಟೆ. ಬಸ್ಸನ್ನು ಗುರುತು ಹಿಡಿಯುವುದು, ಎರಡೆರಡು ಬಸ್ಸುಗಳನ್ನು ಬದಲಾಯಿಸುವುದು ಅವಳಿಗೆ ಗೊತ್ತಾಗದಿದ್ದರೂ ಅದು ಹೇಗೆ ಒಬ್ಬಳೇ ತಿರುಗುತ್ತಿದ್ದಳೋ!!!. ಈಗ ಕಲ್ಪಿಸಿಕೊಂಡರೆ ಪಾಪ ಎನಿಸುತ್ತದೆ.
ಅಮ್ಮಮ್ಮನಿಲ್ಲದ ಅಡುಗೆಮನೆಯಲ್ಲಿ ಈಗ ಅಮ್ಮನದೇ ಕಾರುಭಾರು ; ಅಮ್ಮಮ್ಮ ಇದ್ದಾಗ ಸಿಡಿಮಿಡಿಗುಟ್ಟುತ್ತಿದ್ದ, ಸುಮಾರಾಗಿ ಮಡಿಯ ನಿಯಮಗಳನ್ನು ಪಾಲಿಸುತ್ತಿದ್ದ ಅಮ್ಮ ಈಗ ಕಟ್ಟುನಿಟ್ಟಾಗಿ, ಸ್ವಲ್ಪ ಹೆಚ್ಚೇ ಅವುಗಳನ್ನೆಲ್ಲ ಅನುಸರಿಸುತ್ತಾಳೆ, ಹಬ್ಬಹರಿದಿನಗಳನ್ನು ಸಂಪ್ರದಾಯಬದ್ಧವಾಗಿ ಆಚರಿಸುತ್ತಾಳೆ. ಬಿಟ್ಟುಬಿಟ್ಟರೆ ಅಮ್ಮಮ್ಮನಿಗೆ ನೋವಾಗುತ್ತದೆ, ಮೋಸ ಮಾಡಿದಂತಾಗುತ್ತದೆ ಎನ್ನುವ ಅಪರಾಧೀಪ್ರಜ್ಞೆ ಅವಳನ್ನು ಕಾಡುತ್ತಿದೆ. ಮೊನ್ನೆ ಅಮ್ಮಮ್ಮನ ಗೈರುಹಾಜರಿಯಲ್ಲಿ ಮದುವೆಯಾದ ಮೊದಲ ವರ್ಷದ ದೀಪಾವಳಿಯ ಸಂಭ್ರಮ ; ಅವಳಿದ್ದಿದ್ದರೆ ಮೊಮ್ಮಗಳ ಗಂಡನನ್ನು, ಮನೆಗೆ ಬಂದ ಅಳಿಯನನ್ನು ಅದೆಷ್ಟು ಆದರಿಸುತ್ತಿದ್ದಳೋ . . .
ಕಾಯಿಲೆ-ಕಸಾಲೆ ಎಂದು ಆಸ್ಪತ್ರೆಗಳಿಗೆ ಅಲೆದಾಡದೆ, ಹಾಸಿಗೆ ಹಿಡಿಯದೆ, ಚೆಂದಾಗಿ ತಿರುಗಾಡಿಕೊಂಡಿದ್ದ, ಇಂದಿದ್ದು ನಾಳೆ ಇಲ್ಲ ಎಂದು ನಂಬಲಸಾಧ್ಯವಾದ ರೀತಿಯಲ್ಲಿ ತೀರಿಕೊಂಡ ಅಮ್ಮಮ್ಮ ಬದುಕಿನ ಅನೇಕ ಕ್ಷಣಗಳಲ್ಲಿ ನೆನಪಾಗುತ್ತಲೇ ಇರುತ್ತಾಳೆ. ಈಗಲೂ, ಅಂಗಳದ ಮೆಟ್ಟಿಲಮೇಲೆ ಬಿಸಿಲು ಕಾಯಿಸುತ್ತಾ, ಸೂಜಿಮೆಣಸಿನಕಾಯಿ ಒಣಗಿಸುತ್ತಾ ಕುಳಿತ ಅಮ್ಮಮ್ಮನ ಚಿತ್ರ ಕಣ್ಣಮುಂದೆ ; ಬೆಂಗಳೂರಿನಿಂದ ಮನೆಗೆ ಹೋದಾಗಲೆಲ್ಲಾ ಪಕ್ಕದ ಮನೆಯ ಅಜ್ಜಿಯ ಜೊತೆ ಹರಟುತ್ತಿದ್ದ ಅಮ್ಮಮ್ಮ ತಕ್ಷಣ ಬಂದು ಮಾತನಾಡಿಸುತ್ತಾಳೆ ಎಂದೇ ನಿರೀಕ್ಷೆ . . .

Saturday, November 8, 2008

ಮತ್ತೊಂದು ಮುಖ

ಅದೊಂದು ಭಯಾನಕ ಜಗತ್ತು

ಅಲ್ಲಿರುವವರು ಮನುಷ್ಯರೋ ಎಂಬ ಅನುಮಾನ

ಅಲ್ಲ, ಕೇವಲ ಮನುಷ್ಯರ ಮುಖವಾಡ ಧರಿಸಿರುವವರು

ಸಂದರ್ಭ ಸನ್ನಿವೇಶಗಳಿಗೆ ತಕ್ಕಂತೆ

ಬಣ್ಣ ಬದಲಾಯಿಸುವ ಕಲೆ ಬಲ್ಲವರು

ದೊಡ್ಡ ದೊಡ್ಡ ಪುಸ್ತಕಗಳನ್ನೋದಿ

ಪದವಿಯ ಮೇಲೆ ಪದವಿ ಪಡೆದವರು

ಆದರೇನು ಬಂತು?

ಮೌಲ್ಯ ಆದರ್ಶಗಳನ್ನೆಲ್ಲ ಗಾಳಿಗೆ ತೂರಿದವರು!

ಸೆಮಿನಾರುಗಳಲ್ಲಿ ಪುಟಗಟ್ಟಲೆ ಪ್ರಬಂಧ ಮಂಡಿಸಿ

ಘನವಿದ್ವಾಂಸರಂತೆ ಫೋಸು ಕೊಡುವವರು

ಆದರೆ ಯಾರದೋ ಮೇಲಿನ ದ್ವೇಷಕ್ಕೆ

ಮತ್ಯಾರನ್ನೋ ಬಲಿಪಶು ಮಾಡುವ ಸಣ್ಣವರು

ಬುದ್ಧಿಜೀವಿಗಳು, ವಿಚಾರವಾದಿಗಳು, ಪ್ರಗತಿಪರರು

ಎಂಬ ಹಣೆಪಟ್ಟಿ ಹಚ್ಚಿಸಿಕೊಂಡ ದೊಡ್ಡಮನುಷ್ಯರು

ಆದರೂ ತಮ್ಮೊಳಗಿನ ಸಣ್ಣತನಗಳನ್ನು ಗೆಲ್ಲಲಾಗದವರು

ಇನ್ನೊಬ್ಬರ ಯಶಸ್ಸು ಕಂಡು ಕರುಬುವವರು

ಸ್ನೇಹಿತರಂತೆ ನಟಿಸಿ ಕಾಲೆಳೆಯುವವರು

ಸಂದರ್ಭಕ್ಕಾಗಿ ಹೊಂಚುಹಾಕಿ ಕುಳಿತುಕೊಳ್ಳುವವರು

ಅಂದರೆ ಗುಳ್ಳೆನರಿಗಳಂಥವರು

ಸಿಕ್ಕಿದಾಗ ಬಿಡದೆ ಬೇಕಾದಂತೆ ಉಪಯೋಗಿಸಿಕೊಳ್ಳುವವರು

ಅಂಥವರಿಗಿರುವ ಹೆಸರೇ ಅವಕಾಶವಾದಿಗಳು

ಹೊರಗೆ ಸಭ್ಯರಂತೆ ಮೆರೆಯುವವರು

ಒಳಗೆ ಅತ್ತಿಯ ಹಣ್ಣಿನಂತೆ ಹುಳುಕು ತುಂಬಿದವರು

ಪ್ರತಿಷ್ಠೆ-ಹುದ್ದೆ-ಪ್ರಶಸ್ತಿಗಳಿಗಾಗಿ ಕಚ್ಚಾಡುವವರು

ಅದಕ್ಕಾಗಿ ಎಂಥವರ ಬಳಿ ಹಲ್ಲುಗಿಂಜಲೂ ಹೇಸದವರು

ಇಂಥವರು ಉನ್ನತ ಶಿಕ್ಷಣದ ಬೋಧಕರು

ಇಲ್ಲಿ ಬರೀ ಸ್ವಾರ್ಥ ದ್ವೇಷ ಅಸೂಯೆ ಅನುಮಾನ

ಸ್ನೇಹ-ಪ್ರೀತಿ-ವಿಶ್ವಾಸ-ಪ್ರಾಮಾಣಿಕತೆಗಿಲ್ಲ ಯಾವ ಸ್ಥಾನಮಾನ

ಹೇಳುವುದು ಆಚಾರ ತಿನ್ನುವುದು ಬದನೇಕಾಯಿ

ಎನ್ನುತ್ತಾರಲ್ಲ ಹಾಗೆ

ಮುಖವಾಡಗಳಲ್ಲೇ ಬದುಕುವ ಇಂಥವರಿಗೆ

ಆತ್ಮಸಾಕ್ಷಿ ಚುಚ್ಚುವುದಿಲ್ಲವೇ ?


ಹಂಬಲ

ಬೆಳದಿಂಗಳ ರಾತ್ರಿಯಲ್ಲಿ
ನನ್ನೊಂದಿಗೆ ನೀನಿರಬೇಕಿತ್ತು
ನಿನ್ನೆದೆಗೊರಗಿ ನಾನು
ನನ್ನೆಲ್ಲ ಬೇಸರ ನೋವು
ದುಃಖ ದುಗುಡ ದುಮ್ಮಾನ
ಎಲ್ಲ ಅಂದರೆ ಎಲ್ಲ
ಮರೆಯಬೇಕಿತ್ತು
ನನ್ನ ಕಣ್ಣೀರಿನಿಂದ
ನಿನ್ನೆದೆಯ ತೋಯಿಸಬೇಕಿತ್ತು.Friday, November 7, 2008

ತುಡಿತ

ಹಾರಾಡುವ ಹಕ್ಕಿಗಳು
ಚಲಿಸುವ ಮೋಡಗಳನ್ನು
ನೋಡುತ್ತಾ ಇನ್ನೆಷ್ಟು ದಿನ
ಹೀಗೆಯೇ ಕುಳಿತಿರಲಿ?
ಕಿಟಕಿಯ ಸರಳುಗಳ ಹಿಂದೆ.

ಅವರಿವರಿಗೆ ನೋವಾದೀತೆಂದು
ಭಾವನೆಗಳ ಬಚ್ಚಿಟ್ಟು
ಇನ್ನೆಷ್ಟು ದಿನ ಕಳೆಯಲಿ?
ನಗುಮೊಗವ ಹೊತ್ತು

ಸಂಕೋಲೆಗಳ ಹಿಂದಿನ ಬದುಕು ಸಾಕಾಗಿದೆ
ಇನ್ನಾದರೂ ನಾನು ನನಗಾಗಿ ಬದುಕಬೇಕಾಗಿದೆ.

Friday, September 26, 2008

ಕೇಳೇ ಗೆಳತಿ


ಹೇಗಿದ್ದೀಯಾ ಗೆಳತಿ ? ಎಷ್ಟೊಂದು ದಿನಗಳಾದವಲ್ಲ ನಾನೂ ನೀನೂ ಮಾತಾಡಿ ; ಮದುವೆಯಾದ ಹೊಸತು, ಗಂಡನ ಸಾಂಗತ್ಯ ಸುಖದಲ್ಲಿ ಮೈಮರೆತು ಪ್ರಪಂಚವನ್ನೇ ಮರೆತುಬಿಟ್ಟಿದ್ದಾಳೆ ಎಂದು ಬೈದುಕೊಂಡು, ಜೊತೆಗೇ ನಸುನಕ್ಕು ನೀನೂ ಸುಮ್ಮನಿರಬಹುದು ; ನೀನೊಬ್ಬಳೇ ಅಲ್ಲ, ಎಲ್ಲರೂ ಹಾಗೇ ತಿಳಿದುಕೊಂಡಿದ್ದಾರೆ, ಅದಕ್ಕೆ ಯಾರದೂ ಸುದ್ದಿಯೇ ಇಲ್ಲ. ಮಾತನಾಡಲು ಮನಸ್ಸಿಲ್ಲದೆ ನಾನೂ ಸುಮ್ಮನಿದ್ದೇನೆ. ನಿನಗೆ ಫೋನಾಯಿಸಿದರೆ ಕೀಟಲೆಯ ಮಾತುಗಳನ್ನಾಡಿ ತಮಾಷೆ ಮಾಡುತ್ತೀಯ; ಆಗ ನಾನು ಬಲವಂತವಾಗಿ ನಗಬೇಕಾಗುತ್ತದೆ, ಅಪ್ರಾಮಾಣಿಕತೆಯ ಭಾವ; ಪ್ರತಿಕ್ರಿಯಿಸಬೇಕಾಗುತ್ತದೆ, ಸುಳ್ಳಿನ ಮೊರೆ; ಈ ಗೊಡವೆ ಎಲ್ಲ ಯಾಕೆ ಹೇಳು ? ಅದಕ್ಕೇ ನನ್ನ ಪಾಡಿಗೆ ನಾನಿದ್ದೇನೆ. ಯಾಕೋ ಇತ್ತೀಚಿನ ದಿನಗಳಲ್ಲಿ ಮೌನವೇ ಹೆಚ್ಚು ಆಪ್ತವೆನಿಸುತ್ತಿದೆ.


ನಿನಗೆ ಗೊತ್ತು, ಮದುವೆಯ ಬಗ್ಗೆ ನನಗೆ ಅಂಥ ಒಳ್ಳೆಯ ಭಾವನೆಗಳೇನೂ ಇರಲಿಲ್ಲ. ಇದಕ್ಕೆ ಕಾರಣ, ಕಾಲೇಜು ದಿನಗಳಲ್ಲಿ ತುಂಬಾ ಕನಸುಗಳನ್ನು ಕಟ್ಟಿಕೊಂಡು, ಮದುವೆಯ ನಂತರ ಗಂಡ-ಮನೆ-ಮಕ್ಕಳ ಜವಾಬ್ದಾರಿ, ನಿರೀಕ್ಷೆಗಳ ಭಾರದಲ್ಲಿ ಕುಗ್ಗಿಹೋದ ಕಳೆದುಹೋದ ಕೆಲವು ಗೆಳತಿಯರ ಬದುಕು. ಅದಕ್ಕಿಂತ ಹೆಚ್ಚಾಗಿ ಅಮ್ಮನ ಬದುಕನ್ನು ತುಂಬ ಹತ್ತಿರದಿಂದ ನೋಡಿದ್ದು ; ಅಪ್ಪ ಕುಡುಕನಲ್ಲ, ಕೆಟ್ಟವನಲ್ಲ, ಸಿಗರೇಟು-ಬೀಡಿ ಸೇದುವುದಿಲ್ಲ, ಕವಳ ಹಾಕುವುದಿಲ್ಲ, ತೀರಾ ಬೇಜವಾಬ್ದಾರಿಯೂ ಅಲ್ಲ, ಆಗಾಗ ಇಸ್ಪೀಟು ಆಡಿ ದುಡ್ಡು ಕಳೆಯುವುದನ್ನು ಬಿಟ್ಟರೆ ಬೇರೆ ಯಾವ ಕೆಟ್ಟ ಚಟಗಳೂ ಇಲ್ಲ. ಮತ್ತೇನು ತೊಂದರೆ ಕೇಳುತ್ತೀಯ? . . .ಇವುಗಳಿಗೆ ಹೊರತಾಗಿ ನನ್ನನ್ನ ಕಾಡಿದ್ದು ಸೂಕ್ಷ್ಮಸಂವೇದನೆಗಳಿಲ್ಲದ ಅವನ ವ್ಯಕ್ತಿತ್ವ ; ಭಾವನೆಗಳ ಸೂಕ್ಷ್ಮತೆಗಳು ಅವನಿಗರ್ಥವಾಗುವುದಿಲ್ಲ, ಸ್ಪಂದಿಸುವುದೂ ಗೊತ್ತಿಲ್ಲ. ಇದೇನು ದೊಡ್ಡ ಸಮಸ್ಯೆಯಲ್ಲ, ಆದರೆ ಗೆಳತಿ, ಇಂಥವರನ್ನು ಕಟ್ಟಿಕೊಂಡವರು ಬದುಕಿನ ಸಣ್ಣಪುಟ್ಟ ಸಂಭ್ರಮಗಳಿಂದ, ಸುಖದ ಭಾವಗಳಿಂದ ವಂಚಿತರಾಗಬೇಕಾಗುತ್ತದೆ. ದಿನ ಬೆಳಗಾದರೆ ಜಗಳ, ಸ್ವತಃ ಬುದ್ಧಿ ಇಲ್ಲ, ಹೇಳಿದರೂ ಕೇಳುವುದಿಲ್ಲ, ಸಣ್ಣಪುಟ್ಟ ಸುಳ್ಳು-ಮೋಸ, ಸೋಮಾರಿತನ, ಇನ್ನೊಬ್ಬರಿಗೆ ನೋವಾಗುತ್ತದೆ ಎನ್ನುವ ಪ್ರಜ್ಙೆಯಿಲ್ಲದ ಉಡಾಫೆ ಈ ತರದ್ದನ್ನೆಲ್ಲ ನೋಡುತ್ತಾ ಬೆಳೆದ ನನಗೆ ನನ್ನ ಬದುಕಿನಲ್ಲಿ ಬರುವ ಹುಡುಗನ ಬಗ್ಗೆ ಆತಂಕವಿತ್ತು. ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ, ನಾನು ಖಿನ್ನಳಾದಾಗ, ಬೇಸರ ಕಾಡಿದಾಗ ನನ್ನ ಕೈ ಹಿಡಿದು ಮೇಲೆತ್ತಿ ಜೊತೆಗೆ ಕರೆದುಕೊಂಡು ಹೋಗುವ ಜೊತೆಗಾರನಿಗಾಗಿ, ಮನಸ್ಸನ್ನು ಮುಟ್ಟುವ, ತಟ್ಟುವ, ಕಾಡುವ ಹುಡುಗನಿಗಾಗಿ ಹಂಬಲಿಸಿದ್ದೆ ನಾನು; ನನ್ನ ಬದುಕಿನ ಕಲ್ಪನೆಯೇ ಬೇರೆಯಿತ್ತು . . . . .


ನನಗೆ ತುಂಬ ಸಾಮಾನ್ಯವಾದ ಗಂಡ-ಹೆಂಡತಿಯ ಸಂಬಂಧ ಬೇಕಿಲ್ಲ ; ಐ ವಿಲ್ ಬಿ ಎಕ್ಸ್ಪೆಕ್ಟಿಂಗ್ ಸಂಥಿಂಗ್ ಸ್ಪೆಷಲ್ ಎಂಡ್ ಎಕ್ಸೈಟಿಂಗ್ ಎಕ್ಸ್ಪೀರಿಯನ್ಸಸ್. ಇಲ್ಲದಿದ್ದರೆ ಬದುಕು ಬೋರಾಗುತ್ತದೆ, ಏಕತಾನತೆಯಿಂದ ನರಳುತ್ತದೆ ; ಆಕರ್ಷಣೆಯೇ ಇಲ್ಲದ ಬದುಕು ಯಾರಿಗೆ ಹಿತವಾಗುತ್ತದೆ ಹೇಳು ?. ನನ್ನ ಪ್ರಕಾರ ಜೀವನ ಪ್ರೀತಿಸಿ ಅನುಭವಿಸುವಂತಿರಬೇಕು, ಅದಕ್ಕೆ ಜೀವನಪೂರ್ತಿ ಜೊತೆಯಿರಬೇಕಾದ ವ್ಯಕ್ತಿಯಿಂದ ಒಂದು ರೀತಿಯ ಭಾವನಾತ್ಮಕ ಕಂಫರ್ಟ್ ನೆಸ್ ಸಿಗಬೇಕು. ಇದನ್ನೆಲ್ಲ ನನ್ನ ಹುಡುಗನಿಗೆ ಎಷ್ಟೋ ಸಲ ಹೇಳಿದ್ದೇನೆ. ಆದರೂ ಕೆಲವೊಂದು ಮಾತು-ವರ್ತನೆಗಳಲ್ಲಿ ಅಪ್ಪನ ನೆರಳು, ಆಗೊಮ್ಮೆ ಈಗೊಮ್ಮೆ ಭರಿಸಲಾಗದ ವ್ಯಂಗ್ಯ-ಚುಚ್ಚುಮಾತುಗಳು. ಈ ಗಂಡಸರೇಕೆ ಹೀಗೆ? ಹೆಂಗಸರ ನವಿರು ಭಾವನೆಗಳ ಪ್ರಪಂಚ ಅವರಿಗೇಕೆ ಅರ್ಥವಾಗುವುದಿಲ್ಲ? ಮತ್ತೆ ಮತ್ತೆ ನೋಯಿಸುತ್ತಾರೆ, ಮತ್ತೆ ಮತ್ತೆ ನರಳಿಸುತ್ತಾರೆ. ಮದುವೆಗೆ ಮೊದಲಿನ ಬಣ್ಣದ ಕನಸುಗಳ ಜಾಗದಲ್ಲೀಗ ತೀವ್ರ ನಿರಾಸೆ, ಭ್ರಮನಿರಸನ. . . . .ಕತ್ತಲ ರಾತ್ರಿಯಲ್ಲಿ ಹೆಂಡತಿ ಅಳುತ್ತಿದ್ದಾಳೆ ಎಂದು ಗೊತ್ತಾಗಿಯೂ, ಸಮಾಧಾನ ಮಾಡದೆ, ಸಂತೈಸದೆ ಸುಮ್ಮನೆ ಮಲಗಿದ್ದ ವ್ಯಕ್ತಿ ಮನಸ್ಸಿಗೆ ಹೇಗೆ ಹತ್ತಿರವಾದಾನು? ನೀನೆ ಹೇಳು. ರಾತ್ರಿ ಕಳೆಯುತ್ತದೆ, ಬೆಳಗಾಗುತ್ತದೆ, ಮತ್ತೆ ರಾತ್ರಿ . . . ಕ್ಷಣಗಳು ದಿನಗಳು ಗಾಢ ವಿಷಾದದಲ್ಲಿ ಉರುಳಿಹೋಗುತ್ತಿವೆ . . .ವಾರಕ್ಕೊಮ್ಮೆ ಅಮ್ಮ ಪೋನ್ ಮಾಡುತ್ತಾಳೆ ; ಎಲ್ಲವನ್ನೂ ಹೇಳಿಕೊಂಡು ಅಳಬೇಕೆಂದು ಮನಸ್ಸು ಹಾತೊರೆಯುತ್ತದೆ, ಆದರೆ ಆಗುವುದಿಲ್ಲ; ನನ್ನ ನಿರೀಕ್ಷೆಗಳಿಗೆ ಮಾತಿನ ರೂಪ ಕೊಡಲಾಗದೆ ಸೋಲುತ್ತೇನೆ, ಸುಮ್ಮನಾಗುತ್ತೇನೆ.


ಇನ್ನೆಷ್ಟು ದಿನ ಹೀಗೆ? ಗೊತ್ತಿಲ್ಲ ; ಮಾತನ್ನೇ ಅರ್ಥಮಾಡಿಕೊಳ್ಳದವನು ಮೌನಕ್ಕೆ ಸ್ಪಂದಿಸುತ್ತಾನೆಯೇ?!!!. ಆದಷ್ಟು ಬೇಗ ಮೌನದ ಕಟ್ಟೆಯೊಡೆದು ಹೊರಗೆ ಬರಬೇಕು ; ಬೆಳಗಿನ ಎಳೆಬಿಸಿಲಲ್ಲಿ ಹೊಳೆಯುವ ಎಲೆಗಳಿಂದ, ನಗುವ ಹೂಗಳಿಂದ ಸ್ಫೂರ್ತಿ ಪಡೆಯಲೆತ್ನಿಸಬೇಕು; ಗೆಳೆಯರೊಡನೆ ಹರಟಬೇಕು.

Wednesday, September 10, 2008

ಆ ದಿನಗಳು . . . .

ಕೆಲವು ನೆನಪುಗಳು ಸದಾ ಹಸಿರು ; ನೆನಪಾದಾಗ ಮನಸ್ಸಿನಲ್ಲಿ ಸಂತೋಷದ ಬುಗ್ಗೆ, ಏನೋ ಉಲ್ಲಾಸ ; ಅಂಥವುಗಳಲ್ಲಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕೆಲಸ ಮಾಡ್ತ ಹೈದರಾಬಾದಿನಲ್ಲಿ ಕಳೆದ ದಿನಗಳದೂ ಒಂದು. ಈಗಷ್ಟೇ, ಅಲ್ಲೇ ಕೆಲಸ ಮಾಡುತ್ತಿರುವ ನನ್ನ ಸ್ನೇಹಿತನೊಬ್ಬನಿಗೆ ಫೋನಾಯಿಸಿದ್ದೆ, ಅವನ ಜೊತೆ ಮಾತಾಡುತ್ತಿರುವಾಗ ಅಲ್ಲಿಯ ಚಿತ್ರಗಳೆಲ್ಲ ಕಣ್ನ ಮುಂದೆ - ಹೈದರಾಬಾದಿನ ಬಸ್ ಸ್ಟ್ಯಾಂಡ್, ಕೋಟಿ, ಫಿಲ್ಮ್ ಸಿಟಿ, ಆಫೀಸ್, ಕ್ಯಾಂಟೀನ್, ನಾನು ಮನೆ ಮಾಡಿಕೊಂಡಿದ್ದ ಸ್ಥಳವಾದ ಭಾಗ್ಯಲತಾ, ಸುಲ್ತಾನ್ ಬಜಾರ್ . . . . ಹೀಗೆ ಪ್ರತಿಯೊಂದೂ. ಫೋನ್ ಇಟ್ಟ ಎಷ್ಟೋ ಹೊತ್ತಿನ ನಂತರವೂ ಅದೇ ಗುಂಗು. ಯಾವಾಗಲೂ ಮನುಷ್ಯನಿಗೆ ಬಿಟ್ಟುಬಂದಿದ್ದರ ಬಗ್ಗೆ ವ್ಯಾಮೋಹ ಜಾಸ್ತಿ ಅಂತೆ; ಹ್ಯದರಾಬಾದಿನ ವಿಷಯದಲ್ಲಿ ನಾನೂ ಈ ಭಾವವನ್ನು ಅನುಭವಿಸಿದ್ದೇನೆ, ಅನುಭವಿಸುತ್ತಿರುತ್ತೇನೆ.


ಎಂ.ಎ. ಮುಗಿಸಿ ಕೆಲಸಕ್ಕಾಗಿ ಅಲೆಯುತ್ತಿದ್ದ ದಿನಗಳವು ; ವರ್ಷದ ಮೇಲಾದರೂ ಕೆಲಸ ಸಿಗದಿದ್ದಾಗ ಪಿ.ಯೂ.ಸಿ.ಯಲ್ಲಿ ಮೊದಲು ಸ್ಯನ್ಸ್ ತೆಗೆದುಕೊಂಡು , ನಂತರ ಆರ್ಟ್ಸ್ ಗೆ ಬದಲಾಯಿಸಿಕೊಂಡು, ಅದರಲ್ಲೂ ಕನ್ನಡ ಆಪ್ಶನಲ್ ತೆಗೆದುಕೊಂಡು ನಂತರ ಅದರಲ್ಲೇ ಎಂ.ಎ. ಮಾಡಿದ್ದಕ್ಕೇ ಹೀಗೆ ಎಂದು ಖಿನ್ನತೆಗೆ ಜಾರಿದ್ದುಂಟು. ಯಾರಿಗಿರುವುದಿಲ್ಲ ಹೇಳಿ, ದುಡಿಯುವ ಆಸೆ ; ಅದರಲ್ಲೂ ನನಗಂತೂ ನನ್ನ ಕಾಲ ಮೇಲೆ ನಿಂತುಕೊಂಡು ನನ್ನ ಅನ್ನ ನಾನೇ ಸಂಪಾದಿಸಿಕೊಳ್ಳಬೇಕೆಂಬ ಅದಮ್ಯ ಆಸೆಯಿತ್ತು ; ಹಾಸ್ಟೆಲ್ಲಿನಲ್ಲಿರುವಾಗ ಗೆಳತಿಯರೆಲ್ಲ ಸೇರಿ ಆ ದಿನಗಳ ಬಗ್ಗೆ ಕನಸು ಕಟ್ಟಿಕೊಂಡು ಖುಷಿಪಡುತ್ತಿದ್ದೆವು.ಮುಂದೆ ಈಟಿವಿ ಯಲ್ಲಿ ಕೆಲಸ ಸಿಕ್ಕು ಹೊರಟು ನಿಂತಾಗ ಬಂದ ಪ್ರತಿಕ್ರಿಯೆಗಳು ಅಷ್ಟೇನೂ ಆಶಾದಾಯಾಕವಾಗಿರಲಿಲ್ಲ ; ಕೆಲಸಕ್ಕೋಸ್ಕರ ಅಷ್ಟು ದೂರ . . . ? ಬೇರೆ ರಾಜ್ಯಕ್ಕೆ ಹೋಗಬೇಕಾ ? ಅದರಲ್ಲೂ ಹೆಣ್ಣುಮಗಳು !!! ಅಲ್ಲಿ ಒಬ್ಬಳೇ ಹೇಗಿರ್ತೀಯಾ ?- ಎನ್ನುವಂತಹ ನಿರುತ್ತೇಜಕ ಮಾತುಗಳು ; ನನ್ನ ಮನೆಯಲ್ಲಿ ಹೋಗುವುದು ಬೇಡ ಎಂದು ಹೇಳದಿದ್ದರೂ ಕಳಿಸುವುದಕ್ಕೆ ಅಷ್ಟೇನೂ ಮನಸ್ಸಿರಲಿಲ್ಲ, ಅಲ್ಲಿಗೆ ಹೋದರೆ ಮದುವೆ ಮಾಡುವುದಕ್ಕೆ ತೊಂದರೆಯಾಗುತ್ತದೆ ಎನ್ನುವ ಆತಂಕ. .

ಈ ಜನ ಯಾಕೆ ತಮ್ಮ ಜೀವನವನ್ನು ಸೀಮಿತಗೊಳಿಸಿಕೊಂಡು ಆಲೋಚಿಸುತ್ತಾರೆ, ಹಾಗೆಯೇ ಬದುಕುತ್ತಾರೆ ? ಮದುವೆ-ಗಂಡ-ಮನೆ-ಮಕ್ಕಳು ಈ ಚೌಕಟ್ಟಿನಿಂದ ಹೊರಗೆ ಬಂದು ಹೊಸ ಹೊಸ ಅನುಭವಗಳನ್ನ ಯಾಕೆ ಪಡೆಯಲಿಚ್ಛಿಸುವುದಿಲ್ಲ ? ಎದ್ದಿದ್ದವು ಪ್ರಶ್ನೆಗಳು ; ಆದರೆ ಕೇಳುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ ಎಂದೆನಿಸಿ ಹೈದರಾಬಾದಿಗೆ ಹೊರಟುಬಂದಿದ್ದೆ. ರಾಮೋಜಿ ಫಿಲ್ಮ ಸಿಟಿ, ಈಟೀವಿ ಇವುಗಳ ಬಗ್ಗೆ ಹೊರಗಿನವರಿಗೆ ಸಹಜವಾಗಿ ಒಂದು ರೀತಿಯ ಆಕರ್ಷಣೆ ಇರುವಂತೆ ನಾನೂ ಸಂಭ್ರಮ, ಕುತೂಹಲ, ಆತಂಕ ಇನ್ನೂ ಹೇಳಲಾಗದ ಭಾವಗಳೊಂದಿಗೆ ಹೊಸಾ ಪ್ರಪಂಚದಲ್ಲಿ ಕಾಲಿಟ್ಟಿದ್ದೆ. ಅಲ್ಲಿಂದ ಶುರುವಾಗಿತ್ತು ಹೊಸಾಜೀವನ ; ಪರಿಸರ-ಜನರು-ಭಾಷೆ ಪ್ರತಿಯೊಂದೂ ಹೊಸತೇ.

ರಾಮೋಜಿರಾವ್ ನ ಸಾಮ್ರಾಜ್ಯ ಫಿಲ್ಮ್ ಸಿಟಿ ಒಂದು ಮಾಯಾನಗರಿ ; ಸಿನೆಮಾ ಶೂಟಿಂಗ್ ಗಾಗಿ ಎತ್ತೆರೆತ್ತರದ ಬಿಲ್ಡಿಂಗ್ ಗಳು, ಅರಮನೆ, ಕೋಟೆಗಳು, ದೇಚಸ್ಥಾನ, ಜಗತ್ತಿನ ಬೇರೆ ಬೇರೆ ಸ್ಥಳಗಳ ಮಾದರಿಗಳು ಎಲ್ಲವನ್ನೂ ಕೃತಕವಾಗಿ ನಿರ್ಮಿಸಿ ಅದೇ ಪ್ರದೇಶ ಎಂಬ ಭ್ರಮೆ ಹುಟ್ಟಿಸುತ್ತಾರೆ. ಯಶೋಧಾ ಹಾಸ್ಪಿಟಲ್ ಎಂಬ ಬೋರ್ಡ್ ಇದ್ದ ದೊಡ್ಡ ಕಟ್ಟಡವೊಂದನ್ನು ಎಷ್ಟೋ ದಿನಗಳ ಕಾಲ ನಾನು ನಿಜವಾದ ಆಸ್ಪತ್ರೆ ಎಂದೇ ಭಾವಿಸಿದ್ದೆ!!!. ಪ್ರವಾಸಕ್ಕೆಂದು ಬರುವವರಿಗೆ ನಾನಾ ಬಗೆಯ ಆಟಗಳು, ಮನರಂಜನೆಗಳು, ಕಣ್ಮನ ತಣಿಸುವ ಸುಂದರ ಉದ್ಯಾನವನಗಳು ಜೊತೆಗೆ ಹದಿಮೂರು ಭಾಷೆಗಳ ಈಟಿವಿ ಛಾನಲ್ ಗಳ ಕಛೇರಿಗಳಿರುವುದೂ ಇಲ್ಲೇ. ಮನೆಯಲ್ಲಿದ್ದಾಗ ಕೆಲವು ಧಾರಾವಾಹಿಗಳನ್ನ ನೋಡುತ್ತಿದ್ದ ನನಗೆ ಆ ವಿಭಾಗದಲ್ಲಿಯೇ ಕೆಲಸ ಸಿಕ್ಕಿದ್ದು ವಿಶೇಷ. ಮನೆಯಲ್ಲಿ ಆರಾಮಾಗಿ ಕುಳಿತು ಟೀವಿ ನೋಡುತ್ತಿದ್ದ ನನಗೆ ಅದರ ಹಿಂದೆ ಎಷ್ಟೆಲ್ಲ ಜನರ ಶ್ರಮ, ಏನೆಲ್ಲಾ ತಯಾರಿಗಳಿರುತ್ತವೆ ಎಂದು ಗೊತ್ತಾಗಿದ್ದೇ ಆಗ; ಒಟ್ಟಿನಲ್ಲಿ ಹೊಸಾ ರೀತಿಯ ಕೆಲಸ, ಹೊಸಾ ಅನುಭವ . . .

ಐದಾರು ಜನ ಸ್ನೇಹಿತರು ಸೇರಿಕೊಂಡು ಬಾಡಿಗೆ ಮನೆಗಾಗಿ ಅಲೆದಿದ್ದು.ಮನೆ ಸಿಕ್ಕ ನಂತರ ಮಲಗಲು ಹಾಸಿಗೆ-ತಡಿಗಾಗಿ ಕಷ್ಟಪಟ್ಟಿದ್ದು, ಅಂಗಡಿಗಳಿಗೆ ಏನಾದರೂ ತರಲು ಹೋದಾಗ ಭಾಷೆ ಬರದೆ ಒದ್ದಾಡಿದ್ದು ಎಲ್ಲವೂ ವಿಭಿನ್ನ ಅನುಭವಗಳೇ. ಬೆಂಗಳೂರಿನ ಹಾಗೆ ಅಲ್ಲಿ ಬಾಡಿಗೆ ಮನೆಗೆ ಹೆಚ್ಚು ಹಣ ಇಲ್ಲ, ಜೊತೆಗೆ ಅಡ್ವಾನ್ಸ್ ಎಂದು ಸಾವಿರಾರು ರೂಪಾಯಿ ಸುರಿಯಬೇಕಾಗಿಲ್ಲ, ಒಂದು ತಿಂಗಳ ಬಾಡಿಗೆಯನ್ನು ಹೆಚ್ಚು ಕೊಟ್ಟರಾಯಿತಷ್ಟೆ. ಚಿಕ್ಕ ಮನೆಯನ್ನು ಬಾಡಿಗೆಗೆ ಪಡೆದು ಆರಾಮಾಗಿ ಇರಬಹುದು ; ಜೀವನನಿರ್ವಹಣಾವೆಚ್ಚವೂ ಬೆಂಗಳೂರಿಗೆ ಹೋಲಿಸಿದಾಗ ತುಂಬ ಕಡಿಮೆಯೇ ; ಇಲ್ಲಿ ಪ್ರತಿಯೊಂದಕ್ಕೂ ಹೆಚ್ಚು ಹಣ ಸುರಿಯುವಾಗ ಅಲ್ಲಿಯ ದಿನಗಳು, ಸಂಜೆಗಳು ನೆನಪಾಗುತ್ತವೆ.

ಆರ್ಥಿಕ ಸ್ವಾವಲಂಬನೆ ಮನುಷ್ಯನಿಗೆ ಒಂದು ರೀತಿಯ ನೆಮ್ಮದಿ-ವಿಶ್ವಾಸವನ್ನು ಕೊಡುತ್ತದಂತೆ ; ಮೊದಲ ಸಂಬಳ ಪಡೆದಿದ್ದು, ಅದರಲ್ಲಿ ಮೊಬೈಲ್ ತೆಗೆದುಕೊಂಡಿದ್ದು, ಮೊದಲ ಬಾರಿ ಊರಿಗೆ ಬರುವಾಗ ಅಮ್ಮನಿಗೆ ಸೀರೆ ತಂದಿದ್ದು ಎಲ್ಲವೂ ಖುಷಿ ಕೊಡುವ ನೆನಪುಗಳೇ. ಅಲ್ಲಿ ಕಳೆದಷ್ಟು ದಿನ ಯಾವ ಕಟ್ಟುಪಾಡುಗಳೂ ಇರಲಿಲ್ಲ ; ನನ್ನದೇ ಚಿಕ್ಕ ಮನೆ, ಕೆಲಸ, ಖರ್ಚಿಗೆ ದುಡ್ಡು, ಮನಸೋ ಇಚ್ಛೆ ಅಲೆಯುವುದು . . . . . . ಸ್ವಾತಂತ್ರ್ಯದ ಪರಮಾವಧಿಯನ್ನು ಅನುಭವಿಸಿದ ದಿನಗಳವು.

ಯಾಕೆ ಹೀಗೆ ಹೇಳುತ್ತಿರುವುದೆಂದರೆ ನಮ್ಮ ಸಮಾಜದಲ್ಲಿ ಹುಡುಗಿಯರಿಗೆ ನಿರ್ಬಂಧಗಳು ಜಾಸ್ತಿ ; ಎಲ್ಲಿಗೋ ಹೋಗಬೇಕು, ಯಾರನ್ನೋ ಭೇಟಿ ಮಾಡಬೇಕು, ಏನನ್ನಾದರೂ ಮಾಡಬೇಕು ಎಂದರೆ ನೂರೆಂಟು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ, ಅನುಮಾನದ ನೋಟಗಳನ್ನು ಎದುರಿಸಬೇಕಾಗುತ್ತದೆ; ತಮ್ಮಿಚ್ಛೆಯಂತೆ ಬದುಕನ್ನು ರೂಪಿಸಿಕೊಳ್ಳುವುದು, ಬದುಕುವುದು ಅಷ್ಟು ಸುಲಭವಲ್ಲ ; ಬದುಕೆಂದರೆ ಇಷ್ಟೇ, ಹೀಗೇ ಇರಬೇಕು ಎಂದು ಮಿತಿಗಳನ್ನು ಹಾಕುತ್ತಾರೆ ; ಮಿತಿಗಳಲ್ಲಿ ಬದುಕುವುದು ನನಗಿಷ್ಟವಿಲ್ಲ, ನನ್ನ ಮನೋಭಾವಕ್ಕೆ ಒಗ್ಗುವಂತಹುದೂ ಅಲ್ಲ. ಪ್ರಪಂಚ ವಿಶಾಲವಾಗಿದೆ ; ಎಷ್ಟೊಂದು ಹೊಸ ವಿಷಯಗಳಿವೆ, ವಸ್ತುಗಳಿವೆ, ಅಚ್ಚರಿಗಳಿವೆ ; ಇರುವುದೊಂದೇ ಬದುಕು, ಸಾಧ್ಯವಾದಷ್ಟೂ ವಿಶಿಷ್ಟ-ವಿಭಿನ್ನ ಅನುಭವಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು, ತಿಳಿದುಕೊಳ್ಳಬೇಕು, ಸಮೃದ್ಧಗೊಳಿಸಿಕೊಳ್ಳಬೇಕು ; ಹಿಂಜರಿದರೆ ಎಷ್ಟೋ ಅದ್ಭುತ ಎನಿಸುವಂಥ, ಖುಷಿ ಕೊಡುವಂಥ ಅನುಭವಗಳಿಂದ ವಂಚಿತರಾಗಬೇಕಾಗುತ್ತದೆ. ಹೀಗಾಗಿಯೇ ನನಗೆ ಆ ದಿನಗಳು ವಿಶೇಷವೆನಿಸಿದ್ದು, ಪದೇ ಪದೇ ಕಾಡುವುದೂ ಕೂಡಾ.