Tuesday, December 9, 2008

ಯಾರು ಇರಲಿ, ಬಿಡಲಿ ಬದುಕಿನ ಚಕ್ರ ಉರುಳಲೇಬೇಕು . . .

ಹೀಗೇ ಒಂದು ಸಂಜೆ, ಆಫೀಸ್ ಮುಗಿಸಿ, ಎಂದಿನಂತೆ ಮನೆಗೆ ಹೋಗಲು ಶಿವಾಜಿನಗರದ ಬಸ್ ಸ್ಟ್ಯಾಂಡಿನಲ್ಲಿ ನಿಂತಿದ್ದೆ ; ತುಂಬ ಜನಜಂಗುಳಿ-ರಶ್, ಬಸ್ ಬಂದ ತಕ್ಷಣ ಹತ್ತಲು, ಹೇಗಾದರೂ ಸರಿ ಒಂದು ಸೀಟು ಗಿಟ್ಟಿಸಲು ಜನ ಗುಂಪು ಗುಂಪಾಗಿ ಕಾದು ನಿಂತಿದ್ದರು. ಇಷ್ಟೆಲ್ಲಾ ಜನರ ಮಧ್ಯೆ ಸೀಟು ಹಿಡಿಯುವುದು ಹೇಗಪ್ಪಾಎನ್ನುವ ಚಿಂತೆ, ಅಸಹನೆಯೊಂದಿಗೆ ನಾನೂ ಮೈಯ್ಯೆಲ್ಲ ಕಣ್ಣಾಗಿ ಕಾಯುತ್ತಿದ್ದೆ, ಇದು ಪ್ರತಿದಿನದ ಗೋಳು. ಈಗ ಸ್ವಲ್ಪ ರೂಢಿಯಾಗಿದ್ದರೂ ಬೆಂಗಳೂರಿಗೆ ಬಂದ ಹೊಸತರಲ್ಲಿ ಈ ಸಿಟಿಬಸ್ಸುಗಳಲ್ಲಿ ಓಡಾಡುವ ಹಿಂಸೆಯಿಂದ ಕಂಗಾಲಾಗಿ ಹೋಗಿದ್ದೆ. ಬೆಳಿಗ್ಗೆ ಆಫೀಸಿಗೆ ಹೋಗುವ ಸಮಯದಲ್ಲಿ ಒಂದರ ಹಿಂದೊಂದು ಬಸ್ಸು ಬಂದರೂ ಎಲ್ಲದರಲ್ಲೂ ಕಾಲು ಹಾಕಲೂ ಜಾಗವಿಲ್ಲದಷ್ಟು ಜನರು, ನಿಂತರೆ ನಿಂತೇ ಇರಬೇಕಾಗುತ್ತದೆ ಎಂದು ಹೇಗೋ ನುಗ್ಗಿ ಹತ್ತಿಕೊಂಡರೆ , ಇನ್ನೊಂದು ಬಸ್ಸಿಗೆ ಬರಕ್ಕಾಗಲ್ವೇನ್ರೀ? ಜಾಗ ಇಲ್ಲದೇ ಇದ್ರೂ ಹತ್ತಿಬಿಡ್ತೀರಿ, ಮುಂದೆ ಹೋಗಿ,
ಇಲ್ಲಾ ಇಳೀರಿ ಎನ್ನುವ ಡ್ರೈವರ್ ಗಳ ಧಮಕಿ, ನನಗಂತೂ ತೆಗೆದು ಬಾರಿಸಿಬಿಡಬೇಕು ಎನ್ನುವಷ್ಟು ಸಿಟ್ಟು ಬರುತ್ತಿತ್ತು. ಒಳಗೆ ನುಗ್ಗಿದರೆ ಆಧಾರಕ್ಕೆ ಹಿಡಿದುಕೊಳ್ಳಲು ಕಷ್ಟ, ಉಸಿರಾಡಲು ಸರಿಯಾಗಿ ಗಾಳಿ ಇಲ್ಲದೆ ಒಂಥರಾ ಬಿಸಿಬಿಸಿ ಫೀಲ್, ಬೆವರು ವಾಸನೆ, ಆಚೀಚೆ ಸ್ವಲ್ಪ ಜರುಗಿದರೂ ಪಕ್ಕದಲ್ಲಿದ್ದವರ ಅಸಹನೆ, ಇದರ ನಡುವೆ ಕಂಡಕ್ಟರ್ ನ ಬ್ಯಾಗ್ ಆಚೆ ಇಟ್ಟುಕೊಳ್ರಿ, ಹಿಂದೆ ಬನ್ರಿ, ಸರಿಯಾಗಿ ಚಿಲ್ಲರೆ ಕೊಡಕ್ಕಾಗಲ್ವಾ ಮುಂತಾದ ಗೊಣಗಾಟ . . . ಅವರ ಒತ್ತಡಗಳೇನೆ ಇರಲಿ, ಪ್ರಯಾಣಿಕರ ಜೊತೆ ಡ್ರೈವರ್-ಕಂಡಕ್ಟರ್ ಗಳ ರೂಡ್ ಬಿಹೇವಿಯರ್ ಬಗ್ಗೆ ನನ್ನ ತಕರಾರಿದೆ. ಏನೇನೋ ಸಮಸ್ಯೆ ಟೆನ್ ಶನ್ ಗಳ ಮಧ್ಯೆ ಬೆಳಿಗ್ಗೆ ಬೆಳಿಗ್ಗೇನೆ ಇವರ ಅರಚಾಟ ಸಹಿಸಿಕೊಳ್ಳುವುದು ನಮಗ್ಯಾವ ಕರ್ಮ ?!!
ಹೀಗೆ ಯೋಚಿಸುತ್ತಿರುವಾಗ ಒಂದು ಅಜ್ಜ-ಅಜ್ಜಿ ನಾನು ನಿಂತಿರುವಲ್ಲಿಗೆ ಬಂದರು. ನನಗೆ ಅವರನ್ನು ನೋಡಿ ಪಾಪ ಅನಿಸಿತು ;
ಬಸ್ಸು ಬಂದಾಗ ಉಂಟಾಗುವ ನೂಕುನುಗ್ಗಲಿನಲ್ಲಿ ಕೈಕಾಲು ಗಟ್ಟಿಯಿರುವ ನಮ್ಮಂಥವರಿಗೇ ಹತ್ತುವುದು ಪ್ರಯಾಸದ ಕೆಲಸ, ಹೀಗಿರುವಾಗ ಇವರು ಹೇಗೆ ಹತ್ತುತ್ತಾರೋ ಎಂದು ಕನಿಕರಿಸಿದೆ. ಬಸ್ಸಿನಲ್ಲಿ ಹಿರಿಯ ನಾಗರೀಕರಿಗೆ ಎಂದು ಒಂದು ಸೀಟನ್ನು ಮೀಸಲಿಟ್ಟಿದ್ದರೂ ಅಲ್ಲಿ ಬೇರೆಯವರ್ಯಾರೋ ಕುಳಿತಿರುತ್ತಾರೆ. ಅವರನ್ನು ಎಬ್ಬಿಸಿ ವಯಸ್ಸಾಗಿರುವವರನ್ನು ಕೂರಿಸುವ ಸೌಜನ್ಯವನ್ನು ನಿರ್ವಾಕರೂ ತೋರಿಸುವುದಿಲ್ಲ, ತಾವಾಗೇ ಎದ್ದು ಬಿಟ್ಟುಕೊಡುವ ದೊಡ್ಡ ಮನಸ್ಸು ಕುಳಿತವರಿಗೂ ಇರುವುದಿಲ್ಲ.
ಐದು ನಿಮಿಷಗಳ ನಂತರ ಬಸ್ ಬಂದಾಗ ಯಥಾಪ್ರಕಾರ ಗದ್ದಲ, ತಳ್ಳಾಟ. ಹೆಂಗಸರು ಮುಂದಿನ ಬಾಗಿಲಲ್ಲೂ, ಗಂಡಸರು ಹಿಂದಿನ ಬಾಗಿಲಲ್ಲೂ ನುಗ್ಗಿದರು. ಪಾಪ ಅಜ್ಜಿಗೆ ಅಜ್ಜ ಹತ್ತುತ್ತಿದ್ದಾನೋ ಇಲ್ಲವೋ, ತಾನು ಹತ್ತಬೇಕೋ ಬಿಡಬೇಕೋ ಗೊತ್ತಾಗುತ್ತಿಲ್ಲ. ಗಾಬರಿಯಿಂದ ಆಚೀಚೆ ಹಿಂದಿಂದೆ ನೋಡುತ್ತಾ ಅನುಮಾನದಲ್ಲಿ ಕೊನೆಯಲ್ಲಿ ಹತ್ತಿಕೊಂಡಳು. ಇತ್ತ ಅಜ್ಜಿ ಹತ್ತೇ ಇಲ್ಲ ಎಂದು ಹತ್ತಿದ್ದ ಅಜ್ಜ ಹಿಂದಿನ ಬಾಗಿಲಿನಿಂದ ಇಳಿದ. ಆತ ಇಳಿಯುವುದಕ್ಕೂ ಬಸ್ಸು ಹೊರಡುವುದಕ್ಕೂ ಸರಿಯಾಯಿತು. ನೋಡಿದರೆ ಕೆಳಗೆ ಅಜ್ಜಿ ಇಲ್ಲ!! ನಿಧಾನ ಚಲಿಸುತ್ತಿದ್ದ ಬಸ್ಸಿನ ಪಕ್ಕ ಅಜ್ಜ ಕರೆಯುತ್ತಾ ಓಡಲಾರಂಭಿಸಿದ, ನನಗೆ ಅಯ್ಯೋ ಎನಿಸಿತು. ಒಳಗಿದ್ದ ಅಜ್ಜಿಗೂ ಅಜ್ಜ ಕಾಣದೆ ಆತಂಕವಾಗಿರಬೇಕು. ನಿರ್ವಾಹಕ ಬಸ್ಸು ನಿಲ್ಲಿಸಿದಾಗ ಏದುಸಿರು ಬಿಡುತ್ತಿದ್ದ ಅಜ್ಜ ಅಜ್ಜಿಯನ್ನು ಕರೆದು ಕೈ ಹಿಡಿದು ಇಳಿಸಿಕೊಂಡ. ಇಳಿವಯಸ್ಸಿನ ಈ ಎರಡು ಜೀವಗಳ ಕಷ್ಟ ಮನ ಕಲಕಿತು. ಆಟೋದಲ್ಲಿ ಹೋಗಲು ದುಡ್ಡಿಲ್ಲದವರು, ಸ್ವಂತ ವಾಹನಗಳ ಸೌಕರ್ಯವಿಲ್ಲದವರು ಪರದಾಡಿಕೊಂಡು ಬಸ್ಸಿನಲ್ಲೇ ಹೋಗಬೇಕು. ಈ ಅನಿವಾರ್ಯತೆ, ಅಸಹಾಯಕತೆ ನನ್ನನ್ನು ಬಹಳ ಹೊತ್ತಿವರೆಗೆ ಕಾಡಿತು.
ಈ ಅಜ್ಜ-ಅಜ್ಜಿ ಜನರ ಗುಂಪಿನಲ್ಲಿ ಮರೆಯಾಗುತ್ತಿದ್ದಂತೆ ನನಗೆ ನನ್ನಜ್ಜಿ ನೆನಪಾದಳು. ನಾನವಳನ್ನು ಕರೆಯುತ್ತಿದುದು 'ಅಮ್ಮಮ್ಮ' ಎಂದು. ತುಂಬ ಮಡಿ ಅಜ್ಜಿ ಅವಳು. ನಮ್ಮನ್ನ್ಯಾರನ್ನೂ ಅಡಿಗೆಮನೆಗೇ ಸೇರಿಸುತ್ತಿರಲಿಲ್ಲ. ಕೈ ತೊಳೆಯದೆ ಯಾವ ಪಾತ್ರೆ-ಲೋಟಗಳನ್ನೂ ಮುಟ್ಟುವಂತಿರಲಿಲ್ಲ, ನಾವಾಗೆ ನೀರು ತೆಗೆದುಕೊಂಡು ಕುಡಿಯುವಂತಿರಲಿಲ್ಲ, ಅನ್ನ ಮುಸುರೆ, ಹಾಗಾಗಿ ಅನ್ನ ಮುಟ್ಟಿದ ಕೈಯ್ಯಲ್ಲಿ ಬೇರೆ ಪದಾರ್ಥಗಳನ್ನು ಮುಟ್ಟುವಂತಿಲ್ಲ, ಜೊತೆಗೆ ಶಾಲೆಗೆ ಹೋಗುವಾಗ ಬ್ಯಾಗೆಲ್ಲಾ ಮುಸುರೆಯಾಗುತ್ತದೆಯಾದ್ದರಿಂದ ಬರೀ ಗೋಧಿಯಲ್ಲಿ ಮಾಡಿದ ತಿಂಡಿಗಳನ್ನೇ ತೆಗೆದುಕೊಂಡು ಹೋಗಬೇಕು. ಏಕಾದಶಿ, ಸೋಮವಾರ, ಗುರುವಾರ ಎಂದು ಕೆಲವು ತರಕಾರಿ, ತಿಂಡಿಗಳು ಕೆಲವು ನಿರ್ದಿಷ್ಡ ದಿನಗಳಂದು ನಿಷಿದ್ಧ . . .ಹೀಗೆ ನೂರೆಂಟು ತಾಪತ್ರಯಗಳು.
ಒಮ್ಮೆಯಂತೂ ನಮ್ಮನೆಯ ಕೊಟ್ಟಿಗೆ ಸಗಣಿ ತೆಗೆಯುವ ಹುಡುಗಿಯ ಪುಟ್ಟಮಗಳು ನೀರಿನ ನಲ್ಲಿಯನ್ನು ಮುಟ್ಟಿದ್ದಕ್ಕೆ ದೊಡ್ಡ ರಂಪಾಟವನ್ನೇ ಮಾಡಿದ್ದಳು. ತೋಟದಲ್ಲಿ ಕೆಲಸ ಮಾಡುವ ಆಳುಗಳನ್ನು ಮುಟ್ಟಿಸಿಕೊಳ್ಳುತ್ತಾನೆ ಎಂದು ಅಪ್ಪನ ಜೊತೆಗೂ ಸದಾ ಜಗಳ. ಎಲ್ಲರ ಮೈಯ್ಯಲ್ಲಿ ಹರಿಯುವ ರಕ್ತ ಒಂದೇ, ಮೆಟ್ಟುವ ಭೂಮಿ ಒಂದೇ, ಉಸಿರಾಡುವ ಗಾಳಿ ಒಂದೇ ಎಂದು ಚಿಕ್ಕಂದಿನಲ್ಲಿ ಪುಸ್ತಕಗಳಲ್ಲಿ ಓದಿದ್ದನ್ನ ಎಷ್ಟೋ ಸಾರಿ ನಾನು ಹುಮ್ಮಸಿನಿಂದ ಭಾಷಣ ಬಿಗಿಯುತ್ತಿದ್ದೆ ; ಆವಾಗೆಲ್ಲ ಅಮ್ಮಮ್ಮನದು ಒಂದೇ ನಿರ್ದಿಷ್ಟ ಉತ್ತರ "ಕೆಲವೊಂದಕ್ಕೆ ದೋಷವಿಲ್ಲ", ವಾದವನ್ನು ಹೇಗೆ ಮುಂದುವರೆಸುವುದು? ಪೆಚ್ಚಾಗಿ ಸುಮ್ಮನಾಗುತ್ತಿದ್ದೆ.
ಅಡುಗೆಮನೆಯಲ್ಲಿ ಅಮ್ಮ ಸರಿಯಾಗಿ ಮಡಿ ಮಾಡುವುದಿಲ್ಲ ಎಂದು ಕೆಲವೊಮ್ಮೆ ಅವಳ ಜೊತೆಗೂ ತಕರಾರು ; ಈಗಿನ ಕಾಲದಲ್ಲಿ ತುಂಬ ಮಡಿಯನ್ನು ಯಾರು ಅನುಸರಿಸುತ್ತಾರೆ ಹೇಳಿ? ಆದರೂ ಅಮ್ಮ ತಕ್ಕಮಟ್ಟಿಗೆ ಅನುಸರಿಸಿಕೊಂಡು ಹೋಗುತ್ತಿದ್ದಳಾದರೂ ಒಮ್ಮೊಮ್ಮೆ ಅಮ್ಮಮ್ಮನ ಕಿರಿಕಿರಿ ಸಾಕಾಗಿ ಕೂಗಾಡುತ್ತಿದ್ದಳು. ಆವಾಗೆಲ್ಲ ನಾನು, ನಿನ್ನ ಮಗಳಾಗಿದ್ದಕ್ಕೇ ಇಷ್ಟಾದರೂ ಮಾತು ಕೇಳುತ್ತಾಳೆ, ಎಲ್ಲಾದರೂ ಈ ಮನೆಗೆ ಸೊಸೆ ಬಂದಿದ್ದರೆ ಏನಾಗುತ್ತಿತ್ತೋ ಎಂದು ತಮಾಷೆ ಮಾಡುತ್ತಿದ್ದೆ. ನಾನಾದರೂ ಅಮ್ಮಮ್ಮನ ಎಷ್ಟೋ ನಿಯಮಗಳನ್ನು ಇಷ್ಟವಾಗದಿದ್ದರೂ ಪಾಲಿಸುತ್ತಿದ್ದೆ ; ಆದರೆ ನನ್ನ ತಂಗಿ ಹೇಳಿದ ಮಾತುಗಳನ್ನು ಕೇಳದೆ ಅಮ್ಮಮ್ಮನನ್ನು ಗೋಳುಹೊಯ್ದುಕೊಳ್ಳುತ್ತಿದ್ದಳು ; ಪದೇ ಪದೇ ಕೈ ತೊಳೆದುಕೊಳ್ಳದೆ ಡಬ್ಬಿಗಳಿಂದ ತಾನೇ ಸಿಹಿತಿಂಡಿಗಳನ್ನ ತೆಗೆದುಕೊಂಡು ತಿನ್ನುತ್ತಿದ್ದಳು, ಸ್ನಾನ ಮಾಡದೆ ನನ್ನ ಮುಟ್ಟಬೇಡ ಎಂದರೂ ಬೇಕೆಂದೇ ಅವಳನ್ನು ಮುಟ್ಟಿ, ಮೈ ಮೇಲೆ ಬಿದ್ದು ಕಾಡಿಸುತ್ತಿದ್ದಳು.
ಅಮ್ಮಮ್ಮನಿಗೆ ದೇವರ ಮೇಲೆ ತುಂಬ ಭಕ್ತಿ ; ಬೇರೆ ಬೇರೆ ದೇವಸ್ಥಾನಗಳಲ್ಲಿ ಪೂಜೆ ಮಾಡಿಸಬೇಕು, ಇಷ್ಟು ಜನರಿಗೆ ಊಟ ಹಾಕಿಸಬೇಕು ಎಂದೆಲ್ಲಾ ಆಗಾಗ್ಗೆ ಹಠ ಮಾಡುತ್ತಿದ್ದಳು. ಅಪ್ಪ ತುಂಬ ಹೊತ್ತು ಪೂಜೆ ಮಾಡುವುದಿಲ್ಲ, ಬೇಗ ಮುಗಿಸಿಬಿಡುತ್ತಾನೆ, ಎಲ್ಲ ಮಂತ್ರಗಳನ್ನೂ ಹೇಳುವುದೇ ಇಲ್ಲ ಎಂದು ಅಪ್ಪನ ಮೇಲೂ ಅಸಮದಾನ. ಒಂದೇ, ಎರಡೇ ಅವಳ ರಗಳೆ. . .ಹೀಗೆ ತುಂಬ ವಿಷಯಗಳಲ್ಲಿ ತೊಂದರೆ ಎನಿಸುತ್ತಿದ್ದ, ಕಿರಿಕಿರಿ ಮಾಡುತ್ತಿದ್ದ ಅಮ್ಮಮ್ಮ ಒಂದು ದಿನ ಇದ್ದಕ್ಕಿದ್ದಂತೆ ಯಾವುದೇ ಮುನ್ಸೂಚನೆಯೂ ಇಲ್ಲದೆ ತೀರಿಕೊಂಡುಬಿಟ್ಟಳು. ಹಿತ್ತಿಲ ಅಂಗಳದ ತುಳಸಿಕಟ್ಟೆಯ ಬಳಿ ಬಿದ್ದವಳು ಮೇಲೇಳಲೇ ಇಲ್ಲ, ಮಾತಾಡಲೂ ಇಲ್ಲ.
ಸಾಯುವ ಮೊದಲು ಮೊಮ್ಮಗಳ ಮದುವೆ ಒಂದು ನೋಡಿಬಿಡಬೇಕು ಎಂದು ಬಹಳ ಆಸೆಯಿದ್ದರೂ ಎಂದೂ ನನ್ನನ್ನು ಮದುವೆ ಮಾಡಿಕೊ ಮಾಡಿಕೊ ಎಂದು ಪೀಡಿಸಿರಲಿಲ್ಲ ; ನಾನು ಕೆಲಸಕ್ಕೆಂದು ಹೈದರಾಬಾದಿಗೆ ಹೊರಟುನಿಂತಾಗಲೂ ಅಷ್ಟು ದೂರ ಹೋಗುವುದು ಇಷ್ಟವಿಲ್ಲದಿದ್ದರೂ ಬೇಡ ಎಂದು ನನ್ನ ಉತ್ಸಾಹಕ್ಕೆ ತಣ್ಣೀರೆರಚಿರಲಿಲ್ಲ ; ಗೇಟಿನ ಬಳಿ ನಿಂತು ಅಲ್ಲೇನಾದರೂ ಕಷ್ಟವಾದರೆ ತಕ್ಷಣ ಹೊರಟು ಬಂದುಬಿಡು ಎಂದು ಕಾಳಜಿ ತೋರಿಸಿದವಳು ಮೂರು ತಿಂಗಳ ನಂಯರ ನಾನು ಮರಳಿ ಬಂದಾಗ ಇರಲೇ ಇಲ್ಲ.
ಯಾವಾಗಲೂ ಅಷ್ಟೆ, ಇದ್ದಾಗ ಆ ವ್ಯಕ್ತಿಯ ಬೆಲೆ ಗೊತ್ತಾಗುವುದಿಲ್ಲ. ಇಲ್ಲದಿರುವಾಗ ಛೆ ಹಾಗೆ ಮಾಡಬೇಕಿತ್ತು, ಹೀಗೆ ಮಾಡಬಾರದಿತ್ತು ಎಂದೆಲ್ಲಾ ಕಾಡುವುದಕ್ಕೆ ಶುರುವಾಗುತ್ತದೆ. ಆದರೆ ಅಷ್ಟರಲ್ಲಿ ಕಾಲ ಮೀರಿರುತ್ತದೆ. ಮದುವೆ, ಉಪನಯನ, ಗೃಹಪ್ರವೇಶ ಎಂದು ಕರೆದಿರುತ್ತಿದ್ದ ನೆಂಟರ ಮನೆಗಳಿಗೆ ಹೋಗುವುದಕ್ಕೆ ಅಮ್ಮಮ್ಮನಿಗೆ ತುಂಬ ಹುರುಪು-ಉತ್ಸಾಹ ; ಶಾಲೆಗೆ ರಜಾ ಇದ್ದಾಗಲೆಲ್ಲಾ ನನ್ನನ್ನು ಜೊತೆಗೆ ಬರುವಂತೆ ದುಂಬಾಲು ಬೀಳುತ್ತಿದ್ದಳು. ನೆಂಟರ ಮನೆಗಳನ್ನು ಹತ್ತಿಳಿಯುವುದು ನನಗೆ ಬೋರು, ಹಾಗಾಗಿ ಹೋಗುತ್ತಲೇ ಇರಲಿಲ್ಲ. ಸ್ವಲ್ಪ ಚಿಕ್ಕವಳಿರುವಾಗ ಮಾತ್ರ ಪ್ರತಿವರ್ಷ ಶಿವರಾತ್ರಿಯಂದು ಅವಳ ಜೊತೆ ಕೆಳದಿಯ ದೇವಸ್ತಾನಕ್ಕೆ ಹೋಗುತ್ತಿದ್ದೆ ; ಬುದ್ಧಿ ಬೆಳೆದಿದ್ದೇ ದೇವರ ಮೇಲಿನ ಭಕ್ತಿ-ಉತ್ಕಟತೆ ಕಡಿಮೆಯಾಗಿ ಬಿಟ್ಟುಬಿಟ್ಟೆ. ಬಸ್ಸನ್ನು ಗುರುತು ಹಿಡಿಯುವುದು, ಎರಡೆರಡು ಬಸ್ಸುಗಳನ್ನು ಬದಲಾಯಿಸುವುದು ಅವಳಿಗೆ ಗೊತ್ತಾಗದಿದ್ದರೂ ಅದು ಹೇಗೆ ಒಬ್ಬಳೇ ತಿರುಗುತ್ತಿದ್ದಳೋ!!!. ಈಗ ಕಲ್ಪಿಸಿಕೊಂಡರೆ ಪಾಪ ಎನಿಸುತ್ತದೆ.
ಅಮ್ಮಮ್ಮನಿಲ್ಲದ ಅಡುಗೆಮನೆಯಲ್ಲಿ ಈಗ ಅಮ್ಮನದೇ ಕಾರುಭಾರು ; ಅಮ್ಮಮ್ಮ ಇದ್ದಾಗ ಸಿಡಿಮಿಡಿಗುಟ್ಟುತ್ತಿದ್ದ, ಸುಮಾರಾಗಿ ಮಡಿಯ ನಿಯಮಗಳನ್ನು ಪಾಲಿಸುತ್ತಿದ್ದ ಅಮ್ಮ ಈಗ ಕಟ್ಟುನಿಟ್ಟಾಗಿ, ಸ್ವಲ್ಪ ಹೆಚ್ಚೇ ಅವುಗಳನ್ನೆಲ್ಲ ಅನುಸರಿಸುತ್ತಾಳೆ, ಹಬ್ಬಹರಿದಿನಗಳನ್ನು ಸಂಪ್ರದಾಯಬದ್ಧವಾಗಿ ಆಚರಿಸುತ್ತಾಳೆ. ಬಿಟ್ಟುಬಿಟ್ಟರೆ ಅಮ್ಮಮ್ಮನಿಗೆ ನೋವಾಗುತ್ತದೆ, ಮೋಸ ಮಾಡಿದಂತಾಗುತ್ತದೆ ಎನ್ನುವ ಅಪರಾಧೀಪ್ರಜ್ಞೆ ಅವಳನ್ನು ಕಾಡುತ್ತಿದೆ. ಮೊನ್ನೆ ಅಮ್ಮಮ್ಮನ ಗೈರುಹಾಜರಿಯಲ್ಲಿ ಮದುವೆಯಾದ ಮೊದಲ ವರ್ಷದ ದೀಪಾವಳಿಯ ಸಂಭ್ರಮ ; ಅವಳಿದ್ದಿದ್ದರೆ ಮೊಮ್ಮಗಳ ಗಂಡನನ್ನು, ಮನೆಗೆ ಬಂದ ಅಳಿಯನನ್ನು ಅದೆಷ್ಟು ಆದರಿಸುತ್ತಿದ್ದಳೋ . . .
ಕಾಯಿಲೆ-ಕಸಾಲೆ ಎಂದು ಆಸ್ಪತ್ರೆಗಳಿಗೆ ಅಲೆದಾಡದೆ, ಹಾಸಿಗೆ ಹಿಡಿಯದೆ, ಚೆಂದಾಗಿ ತಿರುಗಾಡಿಕೊಂಡಿದ್ದ, ಇಂದಿದ್ದು ನಾಳೆ ಇಲ್ಲ ಎಂದು ನಂಬಲಸಾಧ್ಯವಾದ ರೀತಿಯಲ್ಲಿ ತೀರಿಕೊಂಡ ಅಮ್ಮಮ್ಮ ಬದುಕಿನ ಅನೇಕ ಕ್ಷಣಗಳಲ್ಲಿ ನೆನಪಾಗುತ್ತಲೇ ಇರುತ್ತಾಳೆ. ಈಗಲೂ, ಅಂಗಳದ ಮೆಟ್ಟಿಲಮೇಲೆ ಬಿಸಿಲು ಕಾಯಿಸುತ್ತಾ, ಸೂಜಿಮೆಣಸಿನಕಾಯಿ ಒಣಗಿಸುತ್ತಾ ಕುಳಿತ ಅಮ್ಮಮ್ಮನ ಚಿತ್ರ ಕಣ್ಣಮುಂದೆ ; ಬೆಂಗಳೂರಿನಿಂದ ಮನೆಗೆ ಹೋದಾಗಲೆಲ್ಲಾ ಪಕ್ಕದ ಮನೆಯ ಅಜ್ಜಿಯ ಜೊತೆ ಹರಟುತ್ತಿದ್ದ ಅಮ್ಮಮ್ಮ ತಕ್ಷಣ ಬಂದು ಮಾತನಾಡಿಸುತ್ತಾಳೆ ಎಂದೇ ನಿರೀಕ್ಷೆ . . .

19 comments:

ರೇಶ್ಮಾ ಎನ್ said...

ತುಂಬಾ ಚೆನ್ನಾಗಿದೆ.. :)ಓದ್ತಿದ್ದ ಹಾಗೆ ನನ್ನಜ್ಜಿ ನೆನಪಾದಳು. ಅವ್ಳು ಸಹ ಹೀಗೆ ಮಡಿ, ಕೊಳೆ, ಮುಸುರೆ ಅಂತಾನೇ ಇರ್ತಾಳೆ.:) ಹೀಗೆ ಬರೆಯುತ್ತಿರಿ..

Mahesh said...

hmm....

Anonymous said...

ರೇಷ್ಮಾ , ಮಹೇಶ್ ಓದಿ ಕಾಮೆಂಟ್ ಮಾಡಿದ್ದಕ್ಕೆ ಥ್ಯಾಂಕ್ಸ್ . .

ಚಂದ್ರಕಾಂತ ಎಸ್ said...

ನಿಮ್ಮ ಬ್ಲಾಗ್ ಗೆ ನನ್ನ ಮೊದಲ ಭೇಟಿ

ಬಹಳ ಸೊಗಸಾಗಿದೆ. ಪ್ರಾರಂಭದ ಬೆಂಗಳೂರಿನ ವೇಗದ ಜೀವನ, ವಯಸ್ಸಾದವರ ಪಡಿಪಾಟಲು ಮನಮಿಡಿಯುವಂತಿದೆ.ಅವರುಗಳು ಬಸ್ ಹತ್ತಿದರೂ ಅವರಿಗಾಗಿ ಮೀಸಲಿಟ್ಟಿರುವ ಆಸನದ ಬಳಿ ಹೋಗಲೂ ಸಾಧ್ಯವಿಲ್ಲದಷ್ಟು ಅಶಕ್ತರಾಗಿರುತ್ತಾರೆ.

ಎರಡನೆಯ ಭಾಗದಲ್ಲಿ ಅಮ್ಮಮ್ಮನ ವ್ಯಕ್ತಿತ್ವ, ಇಡೀ ಮನೆಯ ಮೇಲೆ ಅವರ ಪ್ರಭಾವ, ಅಷ್ಟೆಲ್ಲಾ ಮಡಿವಂತಿಕೆಯಿದ್ದರೂ ಮತ್ತೊಬ್ಬರ ವೈಯಕ್ತಿಕ ನಿರ್ಧಾರಗಳಲ್ಲಿ ಮೂಗು ತೂರಿಸದಿರುವುದು- ಇವೆಲ್ಲಾ ಸುಂದರವಾಗಿ ಮೂಡಿಬಂದಿದೆ.

Anonymous said...

ಚಂದ್ರಕಾಂತ್ ರವರೆ,

ಸ್ವಾಗತ . .ಓದಿ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು. ಹೀಗೇ ಭೇಟಿಕೊಡುತ್ತಿರಿ.

ಮನಸು said...

ನಿಮ್ಮ ಲೇಖನ ತುಂಬ ಚೆನ್ನಾಗಿದೆ, ದಿನ ನಿತ್ಯದ ಬದುಕು ದಿನೇ ದಿನೇ ಬದಲಾವಣೆಗಳನ್ನು ತರುತ್ತದೆ...ಹಾಗೆ ಮಡಿವಂತಿಕೆಯೊ ಬದಲಾಗುತ್ತಹೋಗುತ್ತದೆ .

ಅಜ್ಜಿ, ತಾತ, ಅಪ್ಪ, ಅಮ್ಮ ಇವರೆಲ್ಲ ಇರುವಾಗ ಇವರ ಬೆಲೆ ಅರ್ಥವಾಗುವುದಿಲ್ಲ ಅವರು ಇಲ್ಲದಾಗಲೇ ಅರಿವು ನಮಗೆ ಅವರ ಬೆಲೆ ಹಾಗು ಇರುವಿಕೆ..

ಮುಂಬರುವ ಲೇಖನಗಳ ನೀರೆಕ್ಷೆಯಲ್ಲಿ .....

ವಂದನೆಗಳು.

Ittigecement said...

LEKHANA TUMBAA CHENNAAGIDE..


ಹೊಸ ವರ್ಷದ ಶುಭಾಶಯಗಳು..

ಇಮ್ಮ ಎಲ್ಲ
ಆಸೆ..
ಆಕಾಂಕ್ಷೆಗಳು ಈಡೇರಲಿ...

ಶುಭ ಹಾರೈಕೆಗಳು...

ಧನ್ಯವಾದಗಳು...

Anonymous said...

amaste madem nimma blog chennagide, nanna blognallu kannu hayisi..http://ravirajgalagali.blogspot.com

Rajesh Manjunath - ರಾಜೇಶ್ ಮಂಜುನಾಥ್ said...

ಗ್ರೀಷ್ಮ ಋತುವಿನವರೆ,
ನನ್ನ ಬದುಕಿನಲ್ಲಿ ಬಂದು ಹೋದ, ಈಗ ಸಂಪೂರ್ಣವಾಗಿ ಕಳೆದೆ ಹೋದ ನನ್ನವರೆಲ್ಲರು ನೆನಪಾದರು. ಬರಹ ಚನ್ನಾಗಿದೆ. ಇದರ ಬಗ್ಗೆ ನಾನೊಂದು ಲೇಖನ ಬರೆದಿದ್ದೆ, ಸಾಧ್ಯಾವಾದರೆ ಒಮ್ಮೆ ಓದಿ, ನಿಮಗೆ ಇಷ್ಟವಾಗಬಹುದೇನೋ ಎಂಬ ಭಾವನೆ. ಇನ್ನು ಮುಂದೆ ನಾನು ನಿಮ್ಮ ಲೇಖನಗಳ ಖಾಯಂ ಓದುಗ, ಬರೆಯುತ್ತಿರಿ.
-ರಾಜೇಶ್ ಮಂಜುನಾಥ್

http://manadapisumaathu.blogspot.com/2008/11/blog-post_11.html

Anonymous said...

ಥ್ಯಾಂಕ್ಸ್, ಮನಸು ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ.

ಸಿಮೆಂಟು-ಮರಳಿನ ಮಧ್ಯೆ ಬ್ಲಾಗ್ ಗೆ ಬೇಟಿಕೊಟ್ಟಿದ್ದಕ್ಕೆ ಧನ್ಯವಾದಗಳು ಮತ್ತು ನಿಮಗೂ ಹೊಸವರ್ಷದ ಶುಭಹಾರೈಕೆಗಳು.

ಥ್ಯಾಂಕ್ಸ್ ರವಿರಾಜ್, ಖಂಡಿತಾ ನೋಡ್ತೀನಿ.

ರಾಜೇಶ್, ಓದಿ ಮೆಚ್ಚಿಕೊಂಡಿದ್ದಕ್ಕೆ ತುಂಬಾ ಥ್ಯಾಂಕ್ಸ್,ಖುಷಿಯಾಯಿತು, ನಿಮ್ಮ ಲೇಖನ ಓದ್ತೀನಿ.

Anonymous said...

greeshma hegiddiri ? anda hage nange nimma cell no bekittu, nanage mail madtira ? ravajin@gmail.com

shivu.k said...

ಗ್ರೀಷ್ಮ ಮೇಡಮ್,

ನಿಮ್ಮ ಬ್ಲಾಗಿಗೆ ನನ್ನದು ಮೊದಲ ಭೇಟಿ.....ಇಂದಿನ ಬೆಂಗಳೂರಿನ ಬಸ್ಸಿನ ಬಗ್ಗೆ ಸೊಗಸಾಗಿದೆ ಲೇಖನ....ಅಜ್ಜ-ಅಜ್ಜಿಯರ ಕಥೆಯಂತು ಮನಮುಟ್ಟುವಂತಿದೆ......

ನಿಮ್ಮ ಅಮ್ಮಮ್ಮನ ಪ್ರಸಂಗಗಳು ನನ್ನ ಅಜ್ಜಿಯ ನೆನಪನ್ನು ಮರುಕಳಿಸಿದವು.....ನನ್ನ ಬ್ಲಾಗಿಗೊಮ್ಮೆ ಬಿಡುವು ಮಾಡಿಕೊಂಡು ಬನ್ನಿ.....ಅಲ್ಲಿ ನಿಮಗಿಷ್ಟವಾದ ಲೇಖನಗಳು ಮತ್ತು ಫೋಟೋಗಳು ಸಿಕ್ಕಬಹುದು....
ಬ್ಲಾಗ್ ವಿಳಾಸ:http://chaayakannadi.blogspot.com/

Anonymous said...

ಶಿವು ಅವರೆ,

ಬ್ಲಾಗಿಗೆ ಸ್ವಾಗತ . . .

ನನ್ನ ಅಷ್ಟೂ ಬರಹಗಳನ್ನು ಓದಿ, ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು;ಖುಷಿಯಾಯಿತು. ಆದಷ್ಟು ಬೇಗ ನಿಮ್ಮ ಬ್ಲಾಗ್ ನೋಡುತ್ತೇನೆ.

shivu.k said...

ಮೇಡಮ್,

ಮನಃಪೂರ್ವಕವಾಗಿ ನಗಬೇಕಾ.. ......!! ನಡೆದಾಡುವ ಭೂಪಟಗಳನ್ನು....ನೋಡಲು ಬನ್ನಿ...

http://chaayakannadi.blogspot.com/

ಪ್ರೀತಿಯಿರಲಿ...

ಶಿವು.....

kaligananath gudadur said...

ಗ್ರೀಷ್ಮ 'ಗಾನ' ಹೇಗಿರುತ್ತೆ ಅಂತ ಹಾಗೆ ಭೇಟಿಕೊಟ್ಟೆ. ಸರಳ ನಿರೂಪಣೆ, ಬಿಚ್ಚಿಟ್ಟ ಬದುಕು ಇಷ್ಟವಾಯಿತು. ಹೀಗೆ ಬರೆಯುತ್ತಿರಿ...
-ಕಲಿಗಣನಾಥ ಗುಡದೂರು, ಸಿಂಧನೂರು

kaligananath gudadur said...

ಗ್ರೀಷ್ಮ 'ಗಾನ' ಹೇಗಿರುತ್ತೆ ಅಂತ ಹಾಗೆ ಭೇಟಿಕೊಟ್ಟೆ. ಸರಳ ನಿರೂಪಣೆ, ಬಿಚ್ಚಿಟ್ಟ ಬದುಕು ಇಷ್ಟವಾಯಿತು. ಹೀಗೆ ಬರೆಯುತ್ತಿರಿ...
-ಕಲಿಗಣನಾಥ ಗುಡದೂರು, ಸಿಂಧನೂರು

Anonymous said...

ಕಲಿಗಣನಾಥ್ ರವರೆ,

ನಿಮ್ಮ ಹೆಸರು ತುಂಬ ಕೇಳಿದ್ದೀನಿ,ಕಥೆಗಳನ್ನ ಇನ್ನೂ ಓದಿಲ್ಲ.ಬ್ಲಾಗ್ ಗೆ ಭೇಟಿಕೊಟ್ಟು ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು .

ಮಲ್ಲಿಕಾರ್ಜುನ.ಡಿ.ಜಿ. said...

ತುಂಬಾ ಚೆನ್ನಾಗಿ ಬರೆಯುತ್ತೀರಿ. ಯಾಕೆ ಬರೆಯುವುದು ನಿಲ್ಲಿಸಿದ್ದಿರಿ. ದಯವಿಟ್ಟು ಬರೆಯಿರಿ.

Harihara Sreenivasa Rao said...

keladi, kole(Dust), madi,ivu indina itithaasa,parisaramaaleenya,PHvalugala prateekavagabaaradeeke?
Dr,Harihara Sreenivasarao