
ಈ ಜನ ಯಾಕೆ ತಮ್ಮ ಜೀವನವನ್ನು ಸೀಮಿತಗೊಳಿಸಿಕೊಂಡು ಆಲೋಚಿಸುತ್ತಾರೆ, ಹಾಗೆಯೇ ಬದುಕುತ್ತಾರೆ ? ಮದುವೆ-ಗಂಡ-ಮನೆ-ಮಕ್ಕಳು ಈ ಚೌಕಟ್ಟಿನಿಂದ ಹೊರಗೆ ಬಂದು ಹೊಸ ಹೊಸ ಅನುಭವಗಳನ್ನ ಯಾಕೆ ಪಡೆಯಲಿಚ್ಛಿಸುವುದಿಲ್ಲ ? ಎದ್ದಿದ್ದವು ಪ್ರಶ್ನೆಗಳು ; ಆದರೆ ಕೇಳುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ ಎಂದೆನಿಸಿ ಹೈದರಾಬಾದಿಗೆ ಹೊರಟುಬಂದಿದ್ದೆ. ರಾಮೋಜಿ ಫಿಲ್ಮ ಸಿಟಿ, ಈಟೀವಿ ಇವುಗಳ ಬಗ್ಗೆ ಹೊರಗಿನವರಿಗೆ ಸಹಜವಾಗಿ ಒಂದು ರೀತಿಯ ಆಕರ್ಷಣೆ ಇರುವಂತೆ ನಾನೂ ಸಂಭ್ರಮ, ಕುತೂಹಲ, ಆತಂಕ ಇನ್ನೂ ಹೇಳಲಾಗದ ಭಾವಗಳೊಂದಿಗೆ ಹೊಸಾ ಪ್ರಪಂಚದಲ್ಲಿ ಕಾಲಿಟ್ಟಿದ್ದೆ. ಅಲ್ಲಿಂದ ಶುರುವಾಗಿತ್ತು ಹೊಸಾಜೀವನ ; ಪರಿಸರ-ಜನರು-ಭಾಷೆ ಪ್ರತಿಯೊಂದೂ ಹೊಸತೇ.


ಆರ್ಥಿಕ ಸ್ವಾವಲಂಬನೆ ಮನುಷ್ಯನಿಗೆ ಒಂದು ರೀತಿಯ ನೆಮ್ಮದಿ-ವಿಶ್ವಾಸವನ್ನು ಕೊಡುತ್ತದಂತೆ ; ಮೊದಲ ಸಂಬಳ ಪಡೆದಿದ್ದು, ಅದರಲ್ಲಿ ಮೊಬೈಲ್ ತೆಗೆದುಕೊಂಡಿದ್ದು, ಮೊದಲ ಬಾರಿ ಊರಿಗೆ ಬರುವಾಗ ಅಮ್ಮನಿಗೆ ಸೀರೆ ತಂದಿದ್ದು ಎಲ್ಲವೂ ಖುಷಿ ಕೊಡುವ ನೆನಪುಗಳೇ. ಅಲ್ಲಿ ಕಳೆದಷ್ಟು ದಿನ ಯಾವ ಕಟ್ಟುಪಾಡುಗಳೂ ಇರಲಿಲ್ಲ ; ನನ್ನದೇ ಚಿಕ್ಕ ಮನೆ, ಕೆಲಸ, ಖರ್ಚಿಗೆ ದುಡ್ಡು, ಮನಸೋ ಇಚ್ಛೆ ಅಲೆಯುವುದು . . . . . . ಸ್ವಾತಂತ್ರ್ಯದ ಪರಮಾವಧಿಯನ್ನು ಅನುಭವಿಸಿದ ದಿನಗಳವು.
ಯಾಕೆ ಹೀಗೆ ಹೇಳುತ್ತಿರುವುದೆಂದರೆ ನಮ್ಮ ಸಮಾಜದಲ್ಲಿ ಹುಡುಗಿಯರಿಗೆ ನಿರ್ಬಂಧಗಳು ಜಾಸ್ತಿ ; ಎಲ್ಲಿಗೋ ಹೋಗಬೇಕು, ಯಾರನ್ನೋ ಭೇಟಿ ಮಾಡಬೇಕು, ಏನನ್ನಾದರೂ ಮಾಡಬೇಕು ಎಂದರೆ ನೂರೆಂಟು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ, ಅನುಮಾನದ ನೋಟಗಳನ್ನು ಎದುರಿಸಬೇಕಾಗುತ್ತದೆ; ತಮ್ಮಿಚ್ಛೆಯಂತೆ ಬದುಕನ್ನು ರೂಪಿಸಿಕೊಳ್ಳುವುದು, ಬದುಕುವುದು ಅಷ್ಟು ಸುಲಭವಲ್ಲ ; ಬದುಕೆಂದರೆ ಇಷ್ಟೇ, ಹೀಗೇ ಇರಬೇಕು ಎಂದು ಮಿತಿಗಳನ್ನು ಹಾಕುತ್ತಾರೆ ; ಮಿತಿಗಳಲ್ಲಿ ಬದುಕುವುದು ನನಗಿಷ್ಟವಿಲ್ಲ, ನನ್ನ ಮನೋಭಾವಕ್ಕೆ ಒಗ್ಗುವಂತಹುದೂ ಅಲ್ಲ. ಪ್ರಪಂಚ ವಿಶಾಲವಾಗಿದೆ ; ಎಷ್ಟೊಂದು ಹೊಸ ವಿಷಯಗಳಿವೆ, ವಸ್ತುಗಳಿವೆ, ಅಚ್ಚರಿಗಳಿವೆ ; ಇರುವುದೊಂದೇ ಬದುಕು, ಸಾಧ್ಯವಾದಷ್ಟೂ ವಿಶಿಷ್ಟ-ವಿಭಿನ್ನ ಅನುಭವಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು, ತಿಳಿದುಕೊಳ್ಳಬೇಕು, ಸಮೃದ್ಧಗೊಳಿಸಿಕೊಳ್ಳಬೇಕು ; ಹಿಂಜರಿದರೆ ಎಷ್ಟೋ ಅದ್ಭುತ ಎನಿಸುವಂಥ, ಖುಷಿ ಕೊಡುವಂಥ ಅನುಭವಗಳಿಂದ ವಂಚಿತರಾಗಬೇಕಾಗುತ್ತದೆ. ಹೀಗಾಗಿಯೇ ನನಗೆ ಆ ದಿನಗಳು ವಿಶೇಷವೆನಿಸಿದ್ದು, ಪದೇ ಪದೇ ಕಾಡುವುದೂ ಕೂಡಾ.
3 comments:
ಮಾಯಾನಗರಿ ರಾಮೋಜಿ ಫಿಲ್ಮ್ ಸಿಟಿಯ ಅನುಭವ, ಅಲ್ಲಿಯ ನೆನಪುಗಳ ಕುರಿತಾದ ನಿಮ್ಮ ಲೇಖನ ತುಂಬ ಇಷ್ಟವಾಯಿತು.ನಾನು ಕೂಡ ಈ.ಟಿವಿ ಯಲ್ಲಿಯೇ ಕೆಲಸ ಮಾಡುತ್ತಿರುವುದು. ನಿಮ್ಮ ಕವನಗಳೂ ಬಹಳಷ್ಟು ಅರ್ಥಪೂರ್ಣವಾಗಿವೆ.
ಥಾಂಕ್ಯೂ ಸುಭಾಷ್
ಗ್ರೀಷ್ಮ ಮೇಡಮ್,
ನಿಮ್ಮ ಜೀವನ ಪಯಣ ಚೆನ್ನಾಗಿರಲಿ....ನಿಮ್ಮಿಷ್ಟದಂತೆ ಬದುಕುವುದು ತುಂಬಾ ಸರಿಯಾದ ನಿರ್ದಾರ ಎಂದು ನನ್ನ ಅಭಿಪ್ರಾಯ....ರಾಮೋಜಿರಾವ್ ಫಿಲ್ಮ್ ಸಿಟಿ ನಾನು ನೋಡಬೇಕೆಂಬ ಆಸೆಯಿದೆ....ಅದರ ಪರಿಚಯ ಮಾಡಿಕೊಟ್ಟಿದ್ದಕ್ಕೆ ಥ್ಯಾಂಕ್ಸ್...
ಮತ್ತೆ ನನ್ನ ಬ್ಲಾಗಿನಲ್ಲಿ ಇದುವರೆಗಿನ ಬರೆದ ಲೇಖನಗಳಲ್ಲೇ ಅತ್ಯಂತ ಭಾವುಕತೆಯಿಂದ ಕೂಡಿದ ಲೇಖನ "ತಂಗಿ, ಇದೋ ನಿನಗೊಂದು ಪತ್ರ" ಹಾಕಿದ್ದೇನೆ...ನಿಜ ಘಟನೆಯ ಈ ಲೇಖನವನ್ನು ಬಿಡುವು ಮಾಡಿಕೊಂಡು ಓದುತ್ತಿರಲ್ಲಾ......ಪ್ಲೀಸ್.....
Post a Comment