Friday, September 26, 2008

ಕೇಳೇ ಗೆಳತಿ


ಹೇಗಿದ್ದೀಯಾ ಗೆಳತಿ ? ಎಷ್ಟೊಂದು ದಿನಗಳಾದವಲ್ಲ ನಾನೂ ನೀನೂ ಮಾತಾಡಿ ; ಮದುವೆಯಾದ ಹೊಸತು, ಗಂಡನ ಸಾಂಗತ್ಯ ಸುಖದಲ್ಲಿ ಮೈಮರೆತು ಪ್ರಪಂಚವನ್ನೇ ಮರೆತುಬಿಟ್ಟಿದ್ದಾಳೆ ಎಂದು ಬೈದುಕೊಂಡು, ಜೊತೆಗೇ ನಸುನಕ್ಕು ನೀನೂ ಸುಮ್ಮನಿರಬಹುದು ; ನೀನೊಬ್ಬಳೇ ಅಲ್ಲ, ಎಲ್ಲರೂ ಹಾಗೇ ತಿಳಿದುಕೊಂಡಿದ್ದಾರೆ, ಅದಕ್ಕೆ ಯಾರದೂ ಸುದ್ದಿಯೇ ಇಲ್ಲ. ಮಾತನಾಡಲು ಮನಸ್ಸಿಲ್ಲದೆ ನಾನೂ ಸುಮ್ಮನಿದ್ದೇನೆ. ನಿನಗೆ ಫೋನಾಯಿಸಿದರೆ ಕೀಟಲೆಯ ಮಾತುಗಳನ್ನಾಡಿ ತಮಾಷೆ ಮಾಡುತ್ತೀಯ; ಆಗ ನಾನು ಬಲವಂತವಾಗಿ ನಗಬೇಕಾಗುತ್ತದೆ, ಅಪ್ರಾಮಾಣಿಕತೆಯ ಭಾವ; ಪ್ರತಿಕ್ರಿಯಿಸಬೇಕಾಗುತ್ತದೆ, ಸುಳ್ಳಿನ ಮೊರೆ; ಈ ಗೊಡವೆ ಎಲ್ಲ ಯಾಕೆ ಹೇಳು ? ಅದಕ್ಕೇ ನನ್ನ ಪಾಡಿಗೆ ನಾನಿದ್ದೇನೆ. ಯಾಕೋ ಇತ್ತೀಚಿನ ದಿನಗಳಲ್ಲಿ ಮೌನವೇ ಹೆಚ್ಚು ಆಪ್ತವೆನಿಸುತ್ತಿದೆ.


ನಿನಗೆ ಗೊತ್ತು, ಮದುವೆಯ ಬಗ್ಗೆ ನನಗೆ ಅಂಥ ಒಳ್ಳೆಯ ಭಾವನೆಗಳೇನೂ ಇರಲಿಲ್ಲ. ಇದಕ್ಕೆ ಕಾರಣ, ಕಾಲೇಜು ದಿನಗಳಲ್ಲಿ ತುಂಬಾ ಕನಸುಗಳನ್ನು ಕಟ್ಟಿಕೊಂಡು, ಮದುವೆಯ ನಂತರ ಗಂಡ-ಮನೆ-ಮಕ್ಕಳ ಜವಾಬ್ದಾರಿ, ನಿರೀಕ್ಷೆಗಳ ಭಾರದಲ್ಲಿ ಕುಗ್ಗಿಹೋದ ಕಳೆದುಹೋದ ಕೆಲವು ಗೆಳತಿಯರ ಬದುಕು. ಅದಕ್ಕಿಂತ ಹೆಚ್ಚಾಗಿ ಅಮ್ಮನ ಬದುಕನ್ನು ತುಂಬ ಹತ್ತಿರದಿಂದ ನೋಡಿದ್ದು ; ಅಪ್ಪ ಕುಡುಕನಲ್ಲ, ಕೆಟ್ಟವನಲ್ಲ, ಸಿಗರೇಟು-ಬೀಡಿ ಸೇದುವುದಿಲ್ಲ, ಕವಳ ಹಾಕುವುದಿಲ್ಲ, ತೀರಾ ಬೇಜವಾಬ್ದಾರಿಯೂ ಅಲ್ಲ, ಆಗಾಗ ಇಸ್ಪೀಟು ಆಡಿ ದುಡ್ಡು ಕಳೆಯುವುದನ್ನು ಬಿಟ್ಟರೆ ಬೇರೆ ಯಾವ ಕೆಟ್ಟ ಚಟಗಳೂ ಇಲ್ಲ. ಮತ್ತೇನು ತೊಂದರೆ ಕೇಳುತ್ತೀಯ? . . .ಇವುಗಳಿಗೆ ಹೊರತಾಗಿ ನನ್ನನ್ನ ಕಾಡಿದ್ದು ಸೂಕ್ಷ್ಮಸಂವೇದನೆಗಳಿಲ್ಲದ ಅವನ ವ್ಯಕ್ತಿತ್ವ ; ಭಾವನೆಗಳ ಸೂಕ್ಷ್ಮತೆಗಳು ಅವನಿಗರ್ಥವಾಗುವುದಿಲ್ಲ, ಸ್ಪಂದಿಸುವುದೂ ಗೊತ್ತಿಲ್ಲ. ಇದೇನು ದೊಡ್ಡ ಸಮಸ್ಯೆಯಲ್ಲ, ಆದರೆ ಗೆಳತಿ, ಇಂಥವರನ್ನು ಕಟ್ಟಿಕೊಂಡವರು ಬದುಕಿನ ಸಣ್ಣಪುಟ್ಟ ಸಂಭ್ರಮಗಳಿಂದ, ಸುಖದ ಭಾವಗಳಿಂದ ವಂಚಿತರಾಗಬೇಕಾಗುತ್ತದೆ. ದಿನ ಬೆಳಗಾದರೆ ಜಗಳ, ಸ್ವತಃ ಬುದ್ಧಿ ಇಲ್ಲ, ಹೇಳಿದರೂ ಕೇಳುವುದಿಲ್ಲ, ಸಣ್ಣಪುಟ್ಟ ಸುಳ್ಳು-ಮೋಸ, ಸೋಮಾರಿತನ, ಇನ್ನೊಬ್ಬರಿಗೆ ನೋವಾಗುತ್ತದೆ ಎನ್ನುವ ಪ್ರಜ್ಙೆಯಿಲ್ಲದ ಉಡಾಫೆ ಈ ತರದ್ದನ್ನೆಲ್ಲ ನೋಡುತ್ತಾ ಬೆಳೆದ ನನಗೆ ನನ್ನ ಬದುಕಿನಲ್ಲಿ ಬರುವ ಹುಡುಗನ ಬಗ್ಗೆ ಆತಂಕವಿತ್ತು. ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ, ನಾನು ಖಿನ್ನಳಾದಾಗ, ಬೇಸರ ಕಾಡಿದಾಗ ನನ್ನ ಕೈ ಹಿಡಿದು ಮೇಲೆತ್ತಿ ಜೊತೆಗೆ ಕರೆದುಕೊಂಡು ಹೋಗುವ ಜೊತೆಗಾರನಿಗಾಗಿ, ಮನಸ್ಸನ್ನು ಮುಟ್ಟುವ, ತಟ್ಟುವ, ಕಾಡುವ ಹುಡುಗನಿಗಾಗಿ ಹಂಬಲಿಸಿದ್ದೆ ನಾನು; ನನ್ನ ಬದುಕಿನ ಕಲ್ಪನೆಯೇ ಬೇರೆಯಿತ್ತು . . . . .


ನನಗೆ ತುಂಬ ಸಾಮಾನ್ಯವಾದ ಗಂಡ-ಹೆಂಡತಿಯ ಸಂಬಂಧ ಬೇಕಿಲ್ಲ ; ಐ ವಿಲ್ ಬಿ ಎಕ್ಸ್ಪೆಕ್ಟಿಂಗ್ ಸಂಥಿಂಗ್ ಸ್ಪೆಷಲ್ ಎಂಡ್ ಎಕ್ಸೈಟಿಂಗ್ ಎಕ್ಸ್ಪೀರಿಯನ್ಸಸ್. ಇಲ್ಲದಿದ್ದರೆ ಬದುಕು ಬೋರಾಗುತ್ತದೆ, ಏಕತಾನತೆಯಿಂದ ನರಳುತ್ತದೆ ; ಆಕರ್ಷಣೆಯೇ ಇಲ್ಲದ ಬದುಕು ಯಾರಿಗೆ ಹಿತವಾಗುತ್ತದೆ ಹೇಳು ?. ನನ್ನ ಪ್ರಕಾರ ಜೀವನ ಪ್ರೀತಿಸಿ ಅನುಭವಿಸುವಂತಿರಬೇಕು, ಅದಕ್ಕೆ ಜೀವನಪೂರ್ತಿ ಜೊತೆಯಿರಬೇಕಾದ ವ್ಯಕ್ತಿಯಿಂದ ಒಂದು ರೀತಿಯ ಭಾವನಾತ್ಮಕ ಕಂಫರ್ಟ್ ನೆಸ್ ಸಿಗಬೇಕು. ಇದನ್ನೆಲ್ಲ ನನ್ನ ಹುಡುಗನಿಗೆ ಎಷ್ಟೋ ಸಲ ಹೇಳಿದ್ದೇನೆ. ಆದರೂ ಕೆಲವೊಂದು ಮಾತು-ವರ್ತನೆಗಳಲ್ಲಿ ಅಪ್ಪನ ನೆರಳು, ಆಗೊಮ್ಮೆ ಈಗೊಮ್ಮೆ ಭರಿಸಲಾಗದ ವ್ಯಂಗ್ಯ-ಚುಚ್ಚುಮಾತುಗಳು. ಈ ಗಂಡಸರೇಕೆ ಹೀಗೆ? ಹೆಂಗಸರ ನವಿರು ಭಾವನೆಗಳ ಪ್ರಪಂಚ ಅವರಿಗೇಕೆ ಅರ್ಥವಾಗುವುದಿಲ್ಲ? ಮತ್ತೆ ಮತ್ತೆ ನೋಯಿಸುತ್ತಾರೆ, ಮತ್ತೆ ಮತ್ತೆ ನರಳಿಸುತ್ತಾರೆ. ಮದುವೆಗೆ ಮೊದಲಿನ ಬಣ್ಣದ ಕನಸುಗಳ ಜಾಗದಲ್ಲೀಗ ತೀವ್ರ ನಿರಾಸೆ, ಭ್ರಮನಿರಸನ. . . . .ಕತ್ತಲ ರಾತ್ರಿಯಲ್ಲಿ ಹೆಂಡತಿ ಅಳುತ್ತಿದ್ದಾಳೆ ಎಂದು ಗೊತ್ತಾಗಿಯೂ, ಸಮಾಧಾನ ಮಾಡದೆ, ಸಂತೈಸದೆ ಸುಮ್ಮನೆ ಮಲಗಿದ್ದ ವ್ಯಕ್ತಿ ಮನಸ್ಸಿಗೆ ಹೇಗೆ ಹತ್ತಿರವಾದಾನು? ನೀನೆ ಹೇಳು. ರಾತ್ರಿ ಕಳೆಯುತ್ತದೆ, ಬೆಳಗಾಗುತ್ತದೆ, ಮತ್ತೆ ರಾತ್ರಿ . . . ಕ್ಷಣಗಳು ದಿನಗಳು ಗಾಢ ವಿಷಾದದಲ್ಲಿ ಉರುಳಿಹೋಗುತ್ತಿವೆ . . .ವಾರಕ್ಕೊಮ್ಮೆ ಅಮ್ಮ ಪೋನ್ ಮಾಡುತ್ತಾಳೆ ; ಎಲ್ಲವನ್ನೂ ಹೇಳಿಕೊಂಡು ಅಳಬೇಕೆಂದು ಮನಸ್ಸು ಹಾತೊರೆಯುತ್ತದೆ, ಆದರೆ ಆಗುವುದಿಲ್ಲ; ನನ್ನ ನಿರೀಕ್ಷೆಗಳಿಗೆ ಮಾತಿನ ರೂಪ ಕೊಡಲಾಗದೆ ಸೋಲುತ್ತೇನೆ, ಸುಮ್ಮನಾಗುತ್ತೇನೆ.


ಇನ್ನೆಷ್ಟು ದಿನ ಹೀಗೆ? ಗೊತ್ತಿಲ್ಲ ; ಮಾತನ್ನೇ ಅರ್ಥಮಾಡಿಕೊಳ್ಳದವನು ಮೌನಕ್ಕೆ ಸ್ಪಂದಿಸುತ್ತಾನೆಯೇ?!!!. ಆದಷ್ಟು ಬೇಗ ಮೌನದ ಕಟ್ಟೆಯೊಡೆದು ಹೊರಗೆ ಬರಬೇಕು ; ಬೆಳಗಿನ ಎಳೆಬಿಸಿಲಲ್ಲಿ ಹೊಳೆಯುವ ಎಲೆಗಳಿಂದ, ನಗುವ ಹೂಗಳಿಂದ ಸ್ಫೂರ್ತಿ ಪಡೆಯಲೆತ್ನಿಸಬೇಕು; ಗೆಳೆಯರೊಡನೆ ಹರಟಬೇಕು.

9 comments:

ಸುಧೇಶ್ ಶೆಟ್ಟಿ said...

thumba sundara kalpane.....
thumba ishta aayithu....

- Sudesh

Anonymous said...

ಥ್ಯಾಂಕ್ಯೂ ಸುದೇಶ್.

ಚಿತ್ರಾಕರ್ಕೇರಾ, ದೋಳ್ಪಾಡಿ said...

ಮೊಳಗಲಿ ಗ್ರೀಷ್ಮಗಾನ..ತಣಿಸಲಿ ನಮ್ಮೆಲ್ಲರ ಮನ..ಇನ್ನಷ್ಟು ಬರೆಯಿರಿ.
-ಚಿತ್ರಾ

Santhosh Rao said...

ಬರಹ ಚೆನ್ನಾಗಿದೆ .. ಇಷ್ಟ ಆಯಿತು

ಹೆಂಗಸರ ನವಿರು ಭಾವನೆಗಳ ಪ್ರಪಂಚ ಗಂಡಸರಿಗೆಕೆ ಅರ್ಥವಾಗುವುದಿಲ್ಲ? - ಪೂರ್ವಾಗ್ರಹದ ಕುರುಡು ಪ್ರಶ್ನೆಯಂತೆ ಇದೆ .. ಬಹುಶಃ ಅದು ನಿಮ್ಮ ಸ್ವಂತ ಪ್ರಶ್ನೆ ಮಾತ್ರ ಆಗಲಿಕ್ಕೆ ಸಾದ್ಯ ,

ಧನ್ಯವಾದಗಳು ..

Anonymous said...

ಓದಿ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು ಚಿತ್ರಾ.

ಸಂತೋಷ್, ನಿಮಗೂ ಥ್ಯಾಂಕ್ಸ್. ಪ್ರಶ್ನೆ ಪೂರ್ವಾಗ್ರಹದಿಂದ ಹುಟ್ಟಿದ್ದಲ್ಲ;ಇಷ್ಟು ವರ್ಷ ಸಂಪರ್ಕಕ್ಕೆ ಬಂದ ವ್ಯಕ್ತಿಗಳಿಂದ, ಕೆಲವು ಗೆಳತಿಯರ ಬದುಕನ್ನು ತುಂಬ ಹತ್ತಿರದಿಂದ ನೋಡಿದ್ದರಿಂದ ಬಂದಿದ್ದು;ಇದಕ್ಕೆ ಅಪವಾದ ಎನಿಸಬಹುದಾದ
ಗಂಡಸರೂ ಇರಬಹುದು, ಆದರೆ ಅವರ ಸಂಖ್ಯೆ ಕಡಿಮೆ.

Rajesh Manjunath - ರಾಜೇಶ್ ಮಂಜುನಾಥ್ said...

ಬರಹ ಆಪ್ತವಾಗಿದೆ... ಹುಡುಗಿಯರಂತೆ ನಮ್ಮಂತ ಬಹುತೇಕ ಹುಡುಗರು ಸಹ ಮದುವೆಯ ಬಗ್ಗೆ ಹೀಗೆ ಯೋಚಿಸುತ್ತೇವೆ, ಹೀಗಾಗಿ ನಮಗೆಲ್ಲ ಮದುವೆಯೆಂಬುದು ದುಸ್ವಪ್ನ ಎಂದೆನಿಸಿ ಬಿಟ್ಟಿದೆ. ನಿಮ್ಮ ಬರಹದ ಅವಳನ್ನು ಅವನು ಎಂದು ಮನಸ್ಸಿನಲ್ಲಿ ಬದಲಿಸಿಕೊಂಡು ಓದಿ ಕೊಂಡೆ, ಮನೋಜ್ಞ ಬರಹ, ತುಂಬಾನೇ ಮನಸ್ಸಿಗೆ ಸನಿಹವೆನಿಸಿತು.
ಮತ್ತೊಂದು ಮಾತು ನನ್ನ ಬ್ಲಾಗ್ ಕೊಂಡಿಯನ್ನು ನಿಮ್ಮ ಬ್ಲಾಗ್ ನಲ್ಲಿ ಸೇರಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು, ಆದರೆ ವಿಳಾಸ ತಪ್ಪಾಗಿ ಬಿಟ್ಟಿದೆ ನನ್ನ ಬ್ಲಾಗ್ ವಿಳಾಸ ಇಂತಿದೆ http://manadapisumaathu.blogspot.com/
-ರಾಜೇಶ್ ಮಂಜುನಾಥ್

ತೇಜಸ್ವಿನಿ ಹೆಗಡೆ said...

ಗ್ರೀಷ್ಮಾ ಅವರೆ,

ತುಂಬಾ ಆಪ್ತತೆಯಿದೆ ಈ ಬರಹದಲ್ಲಿ. ಬಹುಶಃ ಸ್ತ್ರೀಯರ ಕೆಲವು ಸೂಕ್ಷ್ಮ ಸಂವೇದನೆಗಳು ಬೇಗ ಪುರುಷರನ್ನು ತಾಗದಿರಬಹುದು. ಇಲ್ಲಾ ಸ್ವಭಾವತಃ ಅಷ್ಟೊಂದು ಭಾವಾರ್ಥಿಗಳಾಗಿರದ ಗಂಡಸರು ಸ್ತ್ರೀಯರ ಕೆಲವು ಕೋಮಲ ಭಾವನೆಗಳಿಗೆ ಸ್ಪಂದಿಸಲಾರದೇ ಇರಬಹುದು. ಏನೇ ಆದರೂ ಸಂಬಂಧಗಳು ನಿಂತಿರುವುದೇ ಭಾವನೆಗಳ ತಳಪಾಯದ ಮೇಲೆ ತಾನೆ?

Anonymous said...

ತೇಜಸ್ವಿನಿ, ನೀವು ಹೇಳಿದ್ದು ನಿಜ; ಸಂಬಂಧಗಳು ಗಟ್ಟಿಯಾಗೋದು, ಆಪ್ತವಾಗೋದು, ಮನಸ್ಸಿಗೆ ಸುಖ ಅನ್ಸೋದು ಭಾವನೆಗಳಿಗೆ ಸ್ಪಂದಿಸಿದಾಗ ಮಾತ್ರ...ಎಲ್ಲರಿಗೂ ಒಂದಲ್ಲಾ ಒಂದು ಸಂದರ್ಭದಲ್ಲಿ ಸರಿಯಾದ ಸ್ಪಂದನ ಸಿಗದೆ ಮನಸ್ಸಿಗೆ ನೋವಾಗಿರುತ್ತದೆ; ಆದರೆ ಸೂಕ್ಷ್ಮಸ್ವಭಾವದ ಹೆಂಗಸರಿಗೆ ಆ ರೀತಿಯ ಅನುಭವ ಜಾಸ್ತಿ ಕಾಡುತ್ತದೆ, ಏನಂತೀರಿ?

shivu.k said...

ಗ್ರೀಷ್ಮ ಮೇಡಮ್,

ಒಂದು ಹೆಣ್ಣಿನ ಮನಮುಟ್ಟುವ ಸ್ವಗತ. ಎಲ್ಲಾ ಹೆಣ್ಣುಮಕ್ಕಳಿಗಿರುವಂತ ಕಲ್ಪನೆ....ಆಸೆ....ಲೇಖನದಲ್ಲಿ ಅಪ್ತವಾಗಿ ಮೂಡಿಬಂದಿವೆ.....ಗಂಡಿನ ವಿಚಾರದಲ್ಲಿ ಪೂರ್ವಗ್ರಹ ಪೀಡಿತರಾಗಿರುವುದು ಲೇಖನದಲ್ಲಿ ಕಾಣುತ್ತದೆ....ಮುಂದುವರಿಸಿ....